

ಕುಂದಗೋಳ: ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ 2023-24ನೇ ಸಾಲಿನ ಸಿಎಸ್ಆರ್ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಿ ಪ್ರೌಢಶಾಲೆಯ ಏಳು ಕೊಠಡಿಗಳನ್ನು ಅಂದಾಜು 1.47 ಕೋಟಿ ರೂ. ಅನುದಾನದಲ್ಲಿ ನಿರ್ವಿುಸಲಾಗಿದೆ. ಆದರೆ, ಶಾಲೆಯಲ್ಲಿ ಮೂಲಸೌಕರ್ಯಗಳಾದ ವಿದ್ಯುತ್ ಸಂಪರ್ಕ, ನೀರು, ಶೌಚಗೃಹ, ಸಾರಿಗೆ, ಕಾಂಪೌಂಡ್, ಕಿಟಕಿ ವ್ಯವಸ್ಥೆ ಇಲ್ಲದ್ದರಿಂದ ವಿದ್ಯಾರ್ಥಿಗಳು, ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ.
ಶಾಲೆಯಲ್ಲಿ ಒಟ್ಟು 131 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸಮರ್ಪಕ ಶೌಚಗೃಹ ಇಲ್ಲದ್ದರಿಂದ ವಿದ್ಯಾರ್ಥಿಗಳು ಪಕ್ಕದ ಹಳ್ಳದ ದಂಡೆ ಅಥವಾ ನಿರ್ಜನ ಪ್ರದೇಶಕ್ಕೆ ಹೋಗುವ ಪರಿಸ್ಥಿತಿ ನಿರ್ವಣವಾಗಿದೆ. ವಿದ್ಯಾರ್ಥಿಗಳು ಹೇಗಾದರೂ ಮಾಡುತ್ತಾರೆ. ಆದರೆ, ವಿದ್ಯಾರ್ಥಿನಿಯರು, ಶಿಕ್ಷಕಿಯರು ಶೌಚಕ್ಕೆ ತೆರಳುವುದು ಸಮಸ್ಯೆಯಾಗಿದೆ.
ಇನ್ನು ಶಾಲೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ್ದರಿಂದ ಸರ್ಕಾರದಿಂದ ಬಂದಿರುವ 15 ಕಂಪ್ಯೂಟರ್ಗಳು ಕೊಠಡಿಯಲ್ಲಿ ಧೂಳು ಹಿಡಿದಿದ್ದು, ಡಿಜಿಟಲ್ ಬೋರ್ಡ್ಗಳನ್ನು ಕೂಡ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಶಾಲೆಯ ಪಕ್ಕದಲ್ಲಿಯೇ ಬಹುಗ್ರಾಮ ಕುಡಿಯುವ ನೀರಿನ ಪೈಪ್ಲೈನ್ ಹಾದುಹೋಗಿದೆ. ವಾರಕ್ಕೊಮ್ಮೆ, ಶಾಲೆ ರಜೆ ಇದ್ದ ವೇಳೆ ಅಥವಾ ಶಾಲೆ ಅವಧಿ ಮುಗಿದ ಬಳಿಕ ನೀರು ಪೂರೈಸಿದರೆ ನೀರನ್ನು ಶೇಖರಿಸಲು ಆಗುತ್ತಿಲ್ಲ. ಹೀಗಾಗಿ, ಶಾಲೆಯ ಸಿಬ್ಬಂದಿ ನಿತ್ಯ ಪಕ್ಕದ ಬೆನಕನಹಳ್ಳಿಗೆ ಹೋಗಿ ನೀರನ್ನು ತರುವಂತಾಗಿದೆ.
ಗ್ರಾಮದ ಕೆಲವರು ಶಾಲೆಯ ಬಳಿ ಬಹಿರ್ದೆಸೆ ಮಾಡುತ್ತಾರೆ. ಕೆಲವರು ಮದ್ಯ ಸೇವಿಸಿ ಬಾಟಲಿ, ಪ್ಯಾಕೆಟ್ಗಳನ್ನು ಎಸೆದು ಹೋಗುತ್ತಾರೆ. ಮೊದಲು ಇಲ್ಲಿ ಶೌಚಗೃಹ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಶಿಕ್ಷಕಿಯರು ಅಳಲು ತೋಡಿಕೊಂಡರು.
ಶಿಕ್ಷಣ ಇಲಾಖೆ, ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಲೆಗೆ ಮೂಲಸೌಲಭ್ಯ ಒದಗಿಸಿ ವಿದ್ಯಾರ್ಥಿಗಳು, ಶಿಕ್ಷಕರು ಅನುಭಿಸುತ್ತಿರುವ ಸಮಸ್ಯೆಗೆ ಮುಕ್ತಿ ಕೊಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಇಲ್ಲ. ಹೀಗಾಗಿ, ಮಕ್ಕಳು ಪಕ್ಕದ ಹಳ್ಳದ ಕಡೆಗೆ ಶೌಚಕ್ಕೆ ಹೋಗುತ್ತಾರೆ. ಏನಾದರು ಅಪಾಯ ಸಂಭವಿಸಿದರೆ ಯಾರು ಹೊಣೆ? ಮಕ್ಕಳನ್ನು ಶಾಲೆಗೆ ಕಳಿಸಲು ಭಯವಾಗುತ್ತಿದೆ.| ರಾಜು ಹೊರಕೇರಿ ಹಿರೇನೆರ್ತಿ ಗ್ರಾಮಸ್ಥ ಶಾಲೆಗೆ ಮೂಲಸೌಕರ್ಯ ಒದಗಿಸಬೇಕೆಂದು ಶಿಕ್ಷಣ ಇಲಾಖೆ, ಗ್ರಾಪಂ, ಜಿಲ್ಲಾಧಿಕಾರಿ ಕಚೇರಿಗೆ 2023ರಲ್ಲೇ ಮನವಿ ಸಲ್ಲಿಸಿದ್ದೇವೆ. ಗ್ರಾಪಂ ವತಿಯಿಂದ ಒಂದು ಶೌಚಗೃಹ ನಿರ್ವಿುಸಲಾಗಿದೆ. ಒಂದೇ ಇರುವುದರಿಂದ ಎಲ್ಲರಿಗೂ ಸಾಕಾಗುತ್ತಿಲ್ಲ. ಕೆಲ ವಿದ್ಯಾರ್ಥಿಗಳು ಪಕ್ಕದ ಹಳ್ಳದ ಹತ್ತಿರ, ರಸ್ತೆ ಪಕ್ಕ ಶೌಚಕ್ಕೆ ಹೋಗುತ್ತಿದ್ದಾರೆ. ಮತ್ಯಷ್ಟು ಶೌಚಗೃಹ ನಿರ್ವಿುಸಿ ಕೊಟ್ಟರೆ ಅನುಕೂಲವಾಗುತ್ತದೆ.| ಪಿ.ಆರ್. ಮ್ಯಾಗೇರಿ ಮುಖ್ಯೋಪಾಧ್ಯಾಯ ಸರ್ಕಾರಿ ಪ್ರೌಢಶಾಲೆ ಹಿರೇನರ್ತಿ ಶಾಲೆಗೆ ಶೌಚಗೃಹ, ಆಟದ ಮೈದಾನ, ಕಾಂಪೌಂಡ್ ನಿರ್ಮಾಣ ಬಗ್ಗೆ ಪಿಡಿಒ ನಮ್ಮ ಜತೆಗೆ ರ್ಚಚಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಕೂಡಲೇ ಕ್ರಿಯಾಯೋಜನೆ ರೂಪಿಸಲು ಹೇಳಿದ್ದೇವೆ. ಅವರು ನೀಡಿದ ತಕ್ಷಣ ಜಿಪಂ ಸಿಇಒ ಅವರ ಜತೆ ರ್ಚಚಿಸಿ ಅನುದಾನ ನೀಡಲಾಗುವುದು.| ಜಗದೀಶ ಕಮ್ಮಾರ ತಾಪಂ ಇಒ