ಉತ್ತರ ಕನ್ನಡದಲ್ಲಿ ಧಾರಕಾರ ಮಳೆ; ಶಿರಸಿ-ಕುಮಟಾ ಹೆದ್ದಾರಿ ಬಂದ್!

ವಿಜಯವಾಣಿ - 2024-07-04T131442.463
Published on

ಕಾರವಾರ: ಜಿಲ್ಲೆಯಲ್ಲಿ ಹವಾಮಾನ ಇಲಾಖೆ‌ ಮುನ್ಸೂಚನೆ ತಲೆಕೆಳಗಾಗಿದ್ದು, ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿತ್ತು. ಆದರೆ, ನಿರಂತರವಾಗಿ ಮಳೆ ಸುರಿದ ಪರಿಣಾಮ ಕಾರವಾರ, ಶಿರಸಿ ಸೇರಿದಂತೆ ಕೆಲವು ನಗರ ಪ್ರದೇಶಗಳು ಜಲಾವೃತಗೊಂಡಿವೆ. ನೆರೆಯ ಪರಿಸ್ಥಿತಿ ಉಂಟಾಗಿದೆ.‌

ಕುಮಟಾ ಕತಗಾಲ ಬಳಿ ರಾಷ್ಟ್ರೀಯ ಹೆದ್ದಾರಿ 766ಇ'ನಲ್ಲಿ ನೀರು ನಿಂತಿದ್ದು, ಶಿರಸಿ-ಕುಮಟಾ ವಾಹನ ಸಂಚಾರ ಸ್ಥಗಿತವಾಗಿದೆ. ಶಿರಸಿ ಕುಮಟಾ ಮಾರ್ಗದಲ್ಲಿ ಉದ್ಯೋಗಕ್ಕೆ ತೆರಳುವವರು, ಬೆಂಗಳೂರು ಕಡೆಯಿಂದ ಬಂದ ಬಸ್​ಗಳು ಬೆಳಗ್ಗೆ 10ರವರೆಗೂ ನಿಂತು ಕೊಂಡಿದ್ದವು. ಎರಡೂ ಕಡೆ ಕಿ.ಮೀಗಟ್ಟಲೇ ದೂರ ವಾಹನಗಳು‌ ನಿಂತಿವೆ.

ಗುಂಡಬಾಳ ಹೊಳೆಗೆ ನೆರೆ: ಗುಂಡಬಾಳ ಹೊಳೆ ಉಕ್ಕಿ ಹರಿದಿದ್ದು, ಹೊಳೆಯ ಇಕ್ಕೆಲಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಶಾಲೆಗಳಿಗೆ ರಜೆ ಘೋಷಣೆ: ಈ ಭಾಗದ ಜನತಾ ವಿದ್ಯಾಲಯ ಅನಿಲಗೋಡ್, ಹಿರಿಯ ಪ್ರಾಥಮಿಕ ಶಾಲೆ ಅನಿಲಗೋಡ, ಗುಂಡ ಬಾಳ ನಂ-2, ಗುಂಡಿ ಬೈಲ್ ನಂ 2, ಹುಡ್ಗೋಡ ಇಟ್ಟಿಹಾದ ಪಬ್ಲಿಕ್ ಸ್ಕೂಲ್ ವಲ್ಕಿ, ಕಿರಿಯ ಪ್ರಾಥಮಿಕ ಶಾಲೆ ಗಂಜಿಗೆರೆ ಈ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಕಾಳಜಿ ಕೇಂದ್ರ: ಗುಂಡ ಬಾಳ ನದಿಗೆ ನೆರೆ ಬಂದು ಚಿಕ್ಕನಕೋಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಜನಕೇರಿ ಮತ್ತು ಹಿತ್ತಲಕೇರಿ ಮಜೇರಿಯ ಮನೆಗಳಿಗೆ ನೀರು ನುಗ್ಗಿದ್ದು, ಈ ಮನೆಯಲ್ಲಿ ವಾಸ್ತವ್ಯ ಇರುವ ಜನರನ್ನು, ಜಿಲ್ಲಾಡಳಿತದ ವತಿಯಿಂದ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಕರೆತಂದು ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಅಘನಾಶಿನಿ ನದಿ ನೀರಿನ ಹರಿವು ತೀವ್ರವಾಗಿದ್ದು, ನೀರು ನದಿಯ ಮಟ್ಟಕ್ಕಿಂತ ಮೇಲೆ ಬರುತ್ತಿದ್ದು, ನದಿ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಕಾರಣ ಐಗಳಕುರ್ವೆ ಗ್ರಾಮದ ಸಾರ್ವಜನಿಕರಿಗೆ ಕಾಳಜಿ ಕೇಂದ್ರಕ್ಕೆ ಬರುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಮಳೆ: ಸಿದ್ದಾಪುರ ತಾಲೂಕಿನ ದೊಡ್ಮನೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಎಂದರೆ 366 ಮಿಮೀ ಮಳೆಯಾಗಿದೆ. ವಾಜಗೋಡು, ಕೋಡ್ಕಣಿ ಹಲಗೇರಿಯಲ್ಲಿ 266 ಮಿಮೀ ಮಳೆ ದಾಖಲಾಗಿದೆ. ಅಘನಾಶಿನಿ ನದಿಯಲ್ಲಿ ಕುಮಟಾ ಭಾಗದಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net