ಮನೆಗಳಿಗೆ ನೀರು ನುಗ್ಗಿ ಅವಾಂತರ

28-KMT- JCB
Published on

ಕುಮಟಾ: ತಾಲೂಕಿನಾದ್ಯಂತ ಮಳೆಯ ಅಬ್ಬರ ಜೋರಾಗಿರುವ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ಅವೈಜ್ಞಾನಿಕ ನಿರ್ಮಾಣಗಳಿಂದ ಮಳೆ ನೀರು ಸರಾಗವಾಗಿ ಹರಿಯಲಾಗದ ಸ್ಥಿತಿಗೆ ಜನ ತೊಂದರೆ ಅನುಭವಿಸುವಂತಾಗಿದೆ.
ಮಂಗಳವಾರ ರಾತ್ರಿ ಜೋರಾಗಿ ಮಳೆ ಸುರಿದಿದ್ದರಿಂದ ಅಳ್ವೇಕೋಡಿಯಲ್ಲಿ ಹೆದ್ದಾರಿಯ ಚರಂಡಿಯಲ್ಲಿ ತುಂಬಿ ಹರಿದ ಮಳೆ ನೀರು ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಹೆದ್ದಾರಿಯುದ್ದಕ್ಕೂ ಹಲವೆಡೆ ವಸತಿ ಪ್ರದೇಶದೊಳಗೆ ನುಗ್ಗಿ ಸಮಸ್ಯೆ ಸೃಷ್ಟಿಸಿದೆ. ಜನರ ದೂರಿನ ಮೇರೆಗೆ ಸ್ಥಳೀಯ ಕಲಭಾಗ ಪಂಚಾಯಿತಿ ಸದಸ್ಯರು, ಪಿಡಿಒ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಈ ವೇಳೆ ರಾಷ್ಟ್ರೀಯ ಹೆದ್ದಾರಿ 66 ರ ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿಜಯವಾಣಿಗೆ ಪ್ರತಿಕ್ರಿಯಿಸಿದ ಸ್ಥಳೀಯ ಗಜು ನಾಯ್ಕ, ಹೆದ್ದಾರಿ ಪಕ್ಕದಲ್ಲಿ ಚರಂಡಿ ಮಾಡಿದ್ದಾರೆ. ಆದರೆ, ಚರಂಡಿ ನೀರು ಚರಂಡಿಯಲ್ಲಿ ಹೋಗುವುದೇ ಇಲ್ಲ. ರಸ್ತೆಯ ಒಂದು ಪಕ್ಕದಲ್ಲಿ ಅಲ್ಲಲ್ಲಿ ಅನಾದಿ ಕಾಲದಿಂದ ನೀರು ಹರಿದು ಹೋಗಲು ಇದ್ದ ಕಾಲುವೆಗಳನ್ನು ಮುಚ್ಚಲಾಗಿದೆ. ಇದರಿಂದಾಗಿಯೇ ಸಮಸ್ಯೆಯಾಗುತ್ತಿದೆ ಎಂದರು. ಮಳೆ ಜೋರಾಗಿ ಬಂದಾಗಲೆಲ್ಲಾ ಇದೇ ಸಮಸ್ಯೆ ಎದುರಿಸಬೇಕಿದೆ ಎಂದು ಸ್ಥಳಕ್ಕೆ ಆಗಮಿಸಿದ್ದ ಪಂಚಾಯಿತಿ ಸದಸ್ಯರು, ಪಿಡಿಒ ಎದುರು ಸ್ಥಳೀಯರು ಅಸಹಾಯಕತೆ ತೋಡಿಕೊಂಡರು. ಬಳಿಕ ಐಆರ್‌ಬಿ ವತಿಯಿಂದ ಜೆಸಿಬಿ ಯಂತ್ರ ತರಿಸಿ ಕಾಲುವೆ ತೋಡಿಸಿ ನೀರು ಸರಾಗ ಹರಿವಿಗೆ ಅನುವು ಮಾಡಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net