

ಶೃಂಗೇರಿ: ಕುವೆಂಪು ಆಚರಿಸಿದ ವಿಚಾರಗಳನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ಉನ್ನತ ಮೌಲ್ಯ ನೀಡಿದರು. ಸಮಾಜದ ಕಟ್ಟುಪಾಡುಗಳನ್ನು ಮೆಟ್ಟಿನಿಂತಿದ್ದನ್ನು ಅವರು ಬರೆದ ಕಾವ್ಯ ಹಾಗೂ ಕಾದಂಬರಿಗಳಲ್ಲಿ ಕಾಣಬಹುದು ಎಂದು ತಹಸೀಲ್ದಾರ್ ಗೌರಮ್ಮ ಹೇಳಿದರು.
ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ದಿನಾಚರಣಾ ಸಮಿತಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಜತೆಗೆ ಪ್ರಕೃತಿ ಕುರಿತು ಅವರಿಗಿದ್ದ ಪ್ರೀತಿಯನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು. ಅವರು ಬರೆದ ಮಹಾಕಾವ್ಯ ರಾಮಾಯಣ ದರ್ಶನಂ ಅನುಪಮ ಕಾವ್ಯ. ಅಲ್ಲಿ ಬರುವ ಎಲ್ಲ ಪಾತ್ರಗಳಿಗೆ ಜೀವಂತಿಕೆ ತುಂಬಿ ಶ್ರೀರಾಮನ ಆದರ್ಶ, ಸೀತಾದೇವಿಯ ತಲ್ಲಣ ಹಾಗೂ ಶಿವನ ಪರಮಭಕ್ತ ರಾವಣನ ಪಾತ್ರಗಳನ್ನು ಚಿತ್ರೀಕರಿಸಿದ ಅವರ ಚಿಂತನೆಗಳು ಉತ್ಕೃಷ್ಟವಾದುದು ಎಂದರು.
ಬೌದ್ಧಿಕ ನೆಲೆಗಟ್ಟಿನಲ್ಲಿ ಕಾವ್ಯ, ಕಾದಂಬರಿಯನ್ನು ರಚಿಸಿ ಜಗತ್ತಿನ ಶ್ರೇಷ್ಠ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರ ಸಾಹಿತ್ಯವನ್ನು ಯುವ ಪೀಳಿಗೆ ಓದುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಸಿ.ಶಂಕರಪ್ಪ ಮಾತನಾಡಿ, ದೇಶದ ಆಧ್ಯಾತ್ಮಿಕ ಮೌಲ್ಯಗಳಿಗೆ ಉನ್ನತ ಕೊಡುಗೆ ನೀಡಿದ ಹಾಗೂ ವಿಶ್ವಮಾನವ ಸಂದೇಶಗಳನ್ನು ಸಮಾಜಕ್ಕೆ ಸಾರಿದ ಶ್ರೇಷ್ಠ ಸಾಹಿತಿ ಕುವೆಂಪು ಜನಮಾನಸದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಆದರ್ಶ ವ್ಯಕ್ತಿಗಳ ಕುರಿತು ಯುವ ಪೀಳಿಗೆ ಹೆಚ್ಚಿನ ಅಧ್ಯಯನ ಮಾಡಬೇಕು. ಅವರ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಜತೆಗೆ ಧಾರ್ಮಿಕ ಶ್ರದ್ಧೆಯ ಅವಶ್ಯಕತೆ ಪ್ರಸ್ತುತ ಅಗತ್ಯವಿದೆ ಎಂದರು.
ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ತಾಲೂಕು ಕಸಾಪ ಪದಾಧಿಕಾರಿ ಸುಬ್ರಹ್ಮಣ್ಯ ಆಚಾರ್, ತಾಲೂಕು ಕಸಾಪ ಪೂರ್ವಾಧ್ಯಕ್ಷ ಕಿಗ್ಗಾ ಶ್ರೀನಿವಾಸ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.