ತಜ್ಞರ ಸಲಹೆಯಂತೆ ಬಳ್ಳಾರಿ ಜಿಲ್ಲೆ ವಿಭಜಿಸಲಾಗಿದೆ ಎಂದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು

01122020 Kampli Minister Sriramulu visit
Published on

ಕಂಪ್ಲಿ: ಕಂಪ್ಲಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಳಿಸಿದ್ದು ರಾಜಕೀಯ ತೀರ್ಮಾನವಲ್ಲ. ಕಾನೂನಾತ್ಮಕವಾಗಿ ತಜ್ಞರ ಸಲಹೆ ಪಡೆದು ಆಡಳಿತಾತ್ಮಕವಾಗಿ ವಿಭಜಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಕಾರಟಗಿಯಲ್ಲಿ ನಡೆಯಲಿದ್ದ ಗ್ರಾಮ ಸ್ವರಾಜ್ ಕಲ್ಪನೆ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗ ಮಧ್ಯೆ, ಕಂಪ್ಲಿಯ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೆ ವಿಜಯನಗರ ಜಿಲ್ಲೆ ರಚಿಸಲಾಗಿದೆ. ಹೊಸಪೇಟೆಯೊಂದಿಗೆ ಕಂಪ್ಲಿ ತಾಲೂಕಿನ ಜನತೆ ಜೀವನಶೈಲಿ, ಒಟನಾಟವಿದ್ದು, ವಿಜಯನಗರ ಜಿಲ್ಲೆಗೆ ಸೇರಿಸದ ಕುರಿತು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಕಂಪ್ಲಿ ಸೇರ್ಪಡೆಗಾಗಿ ನಿನ್ನೆ ಕಂಪ್ಲಿ ಬಂದ್ ಪಕ್ಷಾತೀತವಾಗಿ ನಡೆದಿತ್ತು. ಗಲಾಟೆ, ತಳ್ಳಾಟ ನಡೆದಿದ್ದು ವಿಷಾದನೀಯ. ಶಾಸಕರು ಸಹ ಅವಾಜ್ ಹಾಕುವುದು ಶೋಭೆಯಲ್ಲ, ಸಂಯಮ ತೋರಬೇಕಾಗಿತ್ತು ಎಂದರು.

ಬಿಎಸ್‌ವೈ ನಮ್ಮ ನಾಯಕರಾಗಿದ್ದು, ಉಳಿದ ಅವಧಿಯನ್ನು ಅವರೇ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಲಿದ್ದಾರೆ. ಕಂಪ್ಲಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ರೈತರ ಹಿತಾಸಕ್ತಿಗಾಗಿ ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಯಾವುದೇ ಶುಗರ್ ಲಾಭಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭ ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಪುರಸಭೆ ಸದಸ್ಯರಾದ ವಿ.ಎಲ್.ಬಾಬು, ಸಿ.ಆರ್.ಹನುಮಂತ, ಟಿ.ವಿ.ಸುದರ್ಶನರೆಡ್ಡಿ, ಪ್ರಮುಖರಾದ ಪಿ.ಬ್ರಹ್ಮಯ್ಯ, ಎನ್.ಪುರುಷೋತ್ತಮ, ಬಿ.ಸಿದ್ದಪ್ಪ, ಎನ್.ಚಂದ್ರಕಾಂತರೆಡ್ಡಿ, ಕೊಡಿದಲರಾಜು, ಬಿ.ದೇವೇಂದ್ರ, ಎಂ.ಪ್ರಸನ್ನ, ಸುರೇಶ್, ಪ್ರಭು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net