

ಕಡಬ: ಕಡಬ ಹಾಗೂ ಸುಳ್ಯ ತಾಲೂಕಿನ ಸಂಪರ್ಕ ಕೊಂಡಿ ಕುಂಡಡ್ಕದಲ್ಲಿ ಗೌರಿ ಹೊಳೆಯ ಶಿಥಿಲ ಸೇತುವೆ ಪಕ್ಕದಲ್ಲಿ ನೂತನ ಸೇತುವೆಯ ನಿರ್ಮಾಣ ಪ್ರಕ್ರಿಯೆಗೆ ಸಿದ್ಧತೆ ನಡೆದಿದೆ. ಈ ಭಾಗದ ಬಹು ಬೇಡಿಕೆಯ ಸುಸಜ್ಜಿತ ಸೇತುವೆ ಕನಸು ನನಸಾಗಲಿದೆ.
ಪ್ರತಿದಿನ ನೂರಾರು ವಾಹನಗಳು ಇಲ್ಲಿಂದ ಸಂಚರಿಸುತ್ತವೆ. ವಿದ್ಯಾರ್ಥಿಗಳಿಗೆ, ನಿತ್ಯ ಉದ್ಯೋಗಿಗಳೊಗೆ, ಕೂಲಿ ಕಾರ್ಮಿಕರಿಗೆ ಈ ಸೇತುವೆ ಅನುಕೂಲವಾಗಿದೆ.
ಕಡಬ ತಾಲೂಕಿನ ಪಾಲ್ತಾಡಿ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಗಡಿ ಭಾಗದಲ್ಲಿ ಹರಿಯುವ ಗೌರಿ ಹೊಳೆಗೆ ಈ ಹಿಂದೆ ನಿರ್ಮಿಸಿದ್ದ ಸೇತುವೆ ಹಳೆಯದಾಗಿ ಶಿಥಿಲವಾಗಿತ್ತು. ಪ್ರಸ್ತುತ 75 ಲಕ್ಷ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣವಾಗಲಿದೆ.
ರಸ್ತೆ ಅಭಿವೃದ್ದಿಗೂ ಅನುದಾನ: ಈ ಸೇತುವೆಯನ್ನು ಸಂಪರ್ಕಿಸುವ ಬೆಳ್ಳಾರೆ ಜಿಪಂ ಕ್ಷೇತ್ರಕ್ಕೊಳಪಟ್ಟಿರುವ ಕುಂಡಡ್ಕ ಜಂಕ್ಷನ್‌ನಿಂದ ಚೆನ್ನಾವರ ಮಸೀದಿವರೆಗಿನ ರಸ್ತೆ ಸಂಪೂರ್ಣ ನಾದುರಸ್ತಿಯಲ್ಲಿದೆ. ರಸ್ತೆ ಅಭಿವೃದ್ಧಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸ್ಸಿನಂತೆ 20 ಲಕ್ಷರೂ ಅನುದಾನ ಪ್ರಾಕೃತಿಕ ವಿಕೋಪ ಹಾಗೂ ಮಳೆಹಾನಿ ನಿಧಿಯಡಿ ಮಂಜೂರಾಗಿದೆ.
ಬೆಳಂದೂರು ಜಿಪಂ ಕ್ಷೇತ್ರಕ್ಕೆ ಒಳಪಟ್ಟಂತೆ ಸವಣೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಚೆನ್ನಾವರ ಮಸೀದಿವರೆಗೆ ರಸ್ತೆಯನ್ನು ಸಂಸದರ, ಶಾಸಕರ, ಜಿ.ಪಂ.ತಾ.ಪಂ. ಗ್ರಾ.ಪಂ ಹೀಗೆ ಸುಮಾರು 19 ಲಕ್ಷ ರೂ.ಗಳ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಇನ್ನು ಈ ರಸ್ತೆಯ ಸಂಪರ್ಕದ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ತಾರಿಪಡ್ಪು-ದರ್ಖಾಸು ರಸ್ತೆ ಹಾಗೂ ಸುಳ್ಯ ಕ್ಷೇತ್ರಕ್ಕೆ ಸೇರಿದ ಕಾಪುತಮೂಲೆ ದರ್ಖಾಸು-ಚೆನ್ನಾವರ ರಸ್ತೆ ಅಭಿವೃದ್ಧಿಯಾಗಬೇಕಿದೆ.
ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಎಲ್.ಸಿ.ಸಿಕ್ವೆರಾ ಭೇಟಿ ನೀಡಿ ಅಂದಾಜು ಪಟ್ಟಿ ತಯಾರಿಸಿದ್ದಾರೆ. ಇಂಜಿನಿಯರ್ ಸ್ಥಳ ಪರಿಶೀಲನೆ ವೇಳೆ ಸವಣೂರು ಗ್ರಾಪಂ ಸದಸ್ಯ ಸತೀಶ್ ಅಂಗಡಿಮೂಲೆ, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಉಪಸ್ಥಿತರಿದ್ದರು.
ಎರಡು ತಾಲೂಕು ಹಾಗೂ ಹಲವು ಊರುಗಳಿಗೆ ಸಂಪರ್ಕ ಕೊಂಡಿಯಾಗಿರುವ ಕುಂಡಡ್ಕ ಸೇತುವೆ ಪಕ್ಕದಲ್ಲಿ ಸಮಾರು 75 ಲಕ್ಷ ರೂ.ವೆಚ್ಚದಲ್ಲಿ ಹೊಸದಾಗಿ ಸೇತುವೆ ನಿರ್ಮಿಸುವ ಸಲುವಾಗಿ ಈಗಾಗಲೇ ಲೊಕೋಪಯೋಗಿ ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅಂದಾಜುಪಟ್ಟಿ ತಯಾರಿಸಿದ್ದಾರೆ. ಎಸ್.ಅಂಗಾರ, ಸಚಿವರು