ಕುಂಬ್ರ ಕಾಲನಿ ರಸ್ತೆ ಸ್ವಚ್ಛ : ಕೆಸರು ಮಣ್ಣು ತೆರವು, ಚರಂಡಿ ದುರಸ್ತಿ

road
ಕುಂಬ್ರ ಕೆಪಿಎಸ್ ಬಳಿಯ ಪರಿಶಿಷ್ಟ ಜಾತಿ ಕಾಲನಿ ರಸ್ತೆಯಲ್ಲಿ ತುಂಬಿಕೊಂಡಿದ್ದ ಕೆಸರುಮಣ್ಣು ತೆರವುಗೊಳಿಸಲಾಯಿತು.
Published on

ಪುತ್ತೂರು ಗ್ರಾಮಾಂತರ: ಒಳಮೊಗ್ರು ಗ್ರಾಮದ ಕುಂಬ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಬಳಿಯಿಂದಾಗಿ ಅಲ್ಲಿನ ಪರಿಶಿಷ್ಟ ಜಾತಿ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಸರು ತುಂಬಿಕೊಂಡು ಎದುರಾಗಿದ್ದ ಸಂಚಾರ ಸಮಸ್ಯೆಗೆ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷರು ವೈಯಕ್ತಿಕ ನೆಲೆಯಲ್ಲಿ ಸ್ಪಂದಿಸಿದ್ದು, ರಸ್ತೆಯಲ್ಲಿ ತುಂಬಿಕೊಂಡಿದ್ದ ಕೆಸರು ಮಣ್ಣು ತೆರವುಗೊಳಿಸುವ ಕಾರ್ಯ ಶುಕ್ರವಾರ ನಡೆದಿದೆ.

ಕುಂಬ್ರ ಕೆಪಿಎಸ್ ಬಳಿಯ ಪರಿಶಿಷ್ಟ ಜಾತಿ ಕಾಲನಿ ಸಂಪರ್ಕದ ಕಾಂಕ್ರೀಟ್ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಕೆಸರು ತುಂಬಿ ರಸ್ತೆ ಕೆಸರುಮಯವಾದ ಕಾರಣ ದ್ವಿಚಕ್ರ ವಾಹನ, ಆಟೋ ರಿಕ್ಷಾಗಳಿಗೆ ಸಂಚರಿಸಲು ಕಷ್ಟಕರವಾಗಿತ್ತು. ಮಳೆ ಸುರಿಯುವ ವೇಳೆ ರಸ್ತೆಯಲ್ಲೇ ನೀರು ತುಂಬಿ ತೋಡಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ಜನ ಸಂಚಾರಕ್ಕೂ ತೊಂದರೆಯಾಗಿತ್ತು.

ಸಮಸ್ಯೆ ಸೃಷ್ಟಿ

ಕುಂಬ್ರ ಕೆಪಿಎಸ್ ಶಾಲಾ ಆಟದ ಮೈದಾನದಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ಈ ಹಿಂದೆ ಮಾಡಲಾಗಿದ್ದ ಚರಂಡಿ ಮುಚ್ಚಿ ಹೋಗಿತ್ತು. ಇದರಿಂದಾಗಿ ಮಳೆ ನೀರು ನೇರವಾಗಿ ರಸ್ತೆಗೆ ಹರಿದು ಬರುತ್ತಿತ್ತು. ಮಳೆ ನೀರಿನೊಂದಿಗೆ ಆಟದ ಮೈದಾನದ ಕೆಸರು ಮಣ್ಣು ಕೊಚ್ಚಿಕೊಂಡು ಬಂದು ರಸ್ತೆಗೆ ಬೀಳುತ್ತಿದ್ದುದರಿಂದ ಕಾಂಕ್ರೀಟ್ ರಸ್ತೆಯಲ್ಲಿ ಕೆಸರು ಕೆಸರು ಮಣ್ಣು ತುಂಬಿ ಸಮಸ್ಯೆ ಸೃಷ್ಟಿಯಾಗಿತ್ತು.

ಸಂಚಾರಕ್ಕೆ ಸಮಸ್ಯೆ

ಕರ್ನಾಟಕ ಪಬ್ಲಿಕ್ ಸ್ಕೂಲ್ ಬಳಿಯ ಪರಿಶಿಷ್ಟ ಜಾತಿಯ ಕಾಲನಿಯಲ್ಲಿ 10 ಕುಟುಂಬಗಳು ವಾಸ್ತವ್ಯವಿದ್ದು, ಈ ಸಂಪರ್ಕ ರಸ್ತೆಯನ್ನೇ ಅವಲಂಬಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಕೆಸರು ತುಂಬಿ ಸಂಚಾರಕ್ಕೆ ಸಮಸ್ಯೆಯಾದ ಕಾರಣ ಅಲ್ಲಿನ ಕಾಲನಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕುರಿತು ಅಲ್ಲಿನ ನಿವಾಸಿಗಳು ಗ್ರಾಪಂಗೆ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಕುರಿತು ವಿಜಯವಾಣಿ ಪತ್ರಿಕೆ ಸಮಗ್ರ ವರದಿ ಪ್ರಕಟಿಸಿತ್ತು.

ಪಂಚಾಯಿತಿ ಉಪಾಧ್ಯಕ್ಷರಿಂದ ಸ್ಪಂದನೆ

ಈ ವಿಚಾರವರಿತ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಕುರಿತು ಕಾಲನಿ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದ್ದು, ಬಳಿಕ ಜೆಸಿಬಿ ತಂದು ಅದರ ಮೂಲಕ ರಸ್ತೆಯಲ್ಲಿ ತುಂಬಿಕೊಂಡಿದ್ದ ಕೆಸರುಮಣ್ಣನ್ನು ತೆರವುಗೊಳಿಸಿದರು. ಅಲ್ಲದೆ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ದುರಸ್ತಿ ಮಾಡಿಸಿಕೊಟ್ಟರು. ಕೆಪಿಎಸ್ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು, ಸ್ಥಳೀಯ ನಿವಾಸಿ ಸುಂದರ ಸಹಿತ ಕಾಲನಿ ನಿವಾಸಿಗಳು ಉಪಸ್ಥಿತರಿದ್ದು, ಪಂಚಾಯಿತಿ ಉಪಾಧ್ಯಕ್ಷರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಕಾಂಕ್ರೀಟ್ ರಸ್ತೆಯಲ್ಲಿ ಕೆಸರು ತುಂಬಿಕೊಂಡ ಬಗ್ಗೆ ನಿವಾಸಿಗಳು ದೂರು ನೀಡಿದ್ದರು. ಪತ್ರಿಕೆ ವರದಿಯಲ್ಲೂ ಮಾಹಿತಿ ಲಭಿಸಿತ್ತು. ವೈಯಕ್ತಿಕ ಖರ್ಚಿನಲ್ಲಿ ಜೇಸಿಬಿ ತರಿಸಿ ರಸ್ತೆಯಲ್ಲಿ ತುಂಬಿಕೊಂಡಿದ್ದ ಕೆಸರು ಮಣ್ಣು ತೆರವುಗೊಳಿಸಿ ರಸ್ತೆ ಸಂಚಾರ ಯೋಗ್ಯವನ್ನಾಗಿಸಿರುವೆ. ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ- ಅಶ್ರಫ್ ಉಜಿರೋಡಿಒಳಮೊಗ್ರು ಗ್ರಾಪಂ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net