

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ದೇವಸ್ಥಾನದ ಜೀರ್ಣೋದ್ಧಾರ ಮಾಡಿ ಧಾರ್ಮಿಕ ಕಾರ್ಯ ಆಯೋಜಿಸುವುದರಿಂದ ಗ್ರಾಮಗಳಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀ ವೆಂಕಪ್ಪಯ್ಯ ಓಡೆಯರ್ ಸ್ವಾಮಿ ತಿಳಿಸಿದರು.
ಸೋಂಪುರ ಹೋಬಳಿಯ ಬಿಲ್ಲಿನಕೋಟೆಯಲ್ಲಿ ಶ್ರೀ ಮಹಾಗಣಪತಿ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ಗಂಗಮಾಳಮ್ಮ ದೇವಿಯವರ ನೂತನ ದೇವಾಲಯ ಹಾಗೂ ವಿಮಾನ ಗೋಪುರ ಕಲಶ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವದಲ್ಲಿ ಮಾತನಾಡಿದರು. ಮೂರು ದಿನಗಳಿಂದ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯ ಪೂರೈಸಲಾಗಿದ್ದು, ಸಂಸ್ಕೃತಿ, ಧರ್ಮ ಹಾಗೂ ಆಚಾರ-ವಿಚಾರಗಳ ಮಹತ್ವವನ್ನು ಪ್ರತಿಯೊಬ್ಬರೂ ತಿಳಿಯಬೇಕು ಎಂದರು.
ಸಮಾಜದಲ್ಲಿ ತಂತ್ರಜ್ಞಾನ ಎಷ್ಟೇ ಪ್ರಗತಿಯಾದರೂ ದೇವರು, ಧರ್ಮದ ಬಗ್ಗೆ ಅಭಿಮಾನ, ನಂಬಿಕೆ ಇರುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಪ್ರತಿ ಹಳ್ಳಿಯಲ್ಲಿಯೂ ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ ಕಾರ್ಯಗಳೇ ಸಾಕ್ಷಿ ಎಂದರು.
ಟ್ರಸ್ಟ್ ಸದಸ್ಯ ಬಿ.ಎಂ.ಚಂದ್ರಶೇಖರ್ ಮಾತನಾಡಿ, ಇಂದಿನ ಮನುಷ್ಯನ ಜೀವನ ಯಾಂತ್ರಿಕವಾಗಿದ್ದು, ಬಿಡುವಿಲ್ಲದ ಕಾರ್ಯದಿಂದ ಮಾನಸಿಕ ನೆಮ್ಮದಿ ಕಳೆದುಕೊಂಡು, ಖಿನ್ನತೆಗೆ ಒಳಗಾಗಿದ್ದಾನೆ. ಆದ್ದರಿಂದ ನೆಮ್ಮದಿ ಬದುಕಿಗೆ ದೇವರ ಪ್ರಾರ್ಥನೆ ಮಾಡಬೇಕು ಎಂದರು.
ಗೋರಚಯ್ಯನ ಶೆಟ್ಟಿಹಳ್ಳಿ, ಮಲ್ಲಾಪುರ ಬುಡಕಟ್ಟು ಸಮುದಾಯದಿಂದ ಡೊಳ್ಳು ಕುಣಿತ, ದೋಣಿ ಸೇವೆ ನಡೆಯಿತು.
ಈ ನಿಮಿತ್ತ ವಿಶೇಷ ಪೂಜಾ ಕೈಂಕರ್ಯ ಏರ್ಪಡಿಸಲಾಗಿತ್ತು.ಟ್ರಸ್ಟ್‌ನ ಪದಾಧಿಕಾರಿಗಳಾದ ರಮೇಶ್, ಬಿ.ಆರ್.ರವಿಕುಮಾರ, ಕೆಂಪರಾಜು, ವಕೀಲ ಗಣೇಶ, ಬಿ.ಟಿ.ಹೊನ್ನಪ್ಪ, ನಿಂಗೇಗೌಡ, ಎಂ.ಎಸ್ ಅನಿಲ್ ಕುಮಾರ, ಮುಖಂಡರಾದ ಮಹೇಂದ್ರ ಜೈನ್, ಅನಂತ ನಾಯಕ, ಗ್ರಾಪಂ ಸದಸ್ಯರಾದ ಬಿ.ಜಿ.ಮಂಜುನಾಥ, ರಾಮ ಜೋಗೇಶ್ವರ್ ರಾವ್, ಲಕ್ಷಣ್, ವಿಶ್ವನಾಥ ಐತಾಳ್, ರಾಕೇಶ, ಸುಜಯ್, ಕೋಟ್ರು ಬಸಪ್ಪ, ನಾಗರಾಜು, ವಿಜಯ ಕುಮಾರ ಇದ್ದರು.