10 ರಿಂದ ತಿ.ನರಸೀಪುರದಲ್ಲಿ ಕುಂಭಮೇಳ

Untitled
Published on

ಅವಿನಾಶ್ ಜೈನಹಳ್ಳಿ ಮೈಸೂರು

ದಕ್ಷಿಣದ ಪ್ರಯಾಗರಾಜ್ ಎಂದೇ ಪ್ರಸಿದ್ಧಿ ಪಡೆದಿರುವ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ 6 ವರ್ಷಗಳ ಬಳಿಕ ಫೆ.10 ರಿಂದ ಆರಂಭವಾಗುವ ಮೂರು ದಿನಗಳ ಕುಂಭಮೇಳಕ್ಕೆ ಸಕಲ ಸಿದ್ಧತೆ ಮಾಡಲಾಗಿದ್ದು, ಪುಣ್ಯಸ್ನಾನಕ್ಕೆ ಸಜ್ಜುಗೊಳಿಸಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಮಧ್ಯೆ ನರಸೀಪುರದ ತ್ರಿವೇಣಿ ಸಂಗಮದಲ್ಲೂ ಫೆ.10ರಿಂದ 12ರವರೆಗೆ ಕುಂಭಮೇಳ ನಡೆಯಲಿದ್ದು, ಭಕ್ತರು ಪುಣ್ಯಸ್ನಾನ ಮಾಡಬಹುದಾಗಿದೆ.

ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ ಸ್ಫಟಿಕ ಸರೋವರ ಕೂಡುವ ಸ್ಥಳ, ಯಾಗಮಂಟಪ ಹಾಗೂ ಧಾರ್ಮಿಕ ಸಭಾಂಗಣದ ವೇದಿಕೆಗೆ ತೆರಳಲು ಮರಳಿನ ಮೂಟೆಗಳನ್ನು ಜೋಡಿಸಿ ದಾರಿ ಮಾಡಲಾಗಿದೆ. ಜಿಲ್ಲಾಡಳಿತದಿಂದ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ಶಿವಪುರಿ ಸ್ವಾಮೀಜಿ ತಿ.ನರಸೀಪುರದ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮೂರು ವರ್ಷಕ್ಕೊಮ್ಮೆ ಕುಂಭಮೇಳ ಆಚರಿಸಲು ನಿರ್ಧಾರ ಕೈಗೊಂಡಿದ್ದರು. ಅದರಂತೆ 1989ರಲ್ಲಿ ಪ್ರಥಮ ಕುಂಭಮೇಳ ನಡೆಯಿತು. ಅಲ್ಲಿಂದು ಪ್ರತಿ ಮೂರು ವರ್ಷಕ್ಕೆ ಒಮ್ಮೆ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಕುಂಭಮೇಳ ನಡೆಸಿಕೊಂಡು ಬರಲಾಗುತ್ತಿದ್ದು, ಅದರಂತೆ ಈ ಬಾರಿ 2025ರ ಫೆ.10ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 2021ರಲ್ಲಿ ಕುಂಭಮೇಳ ಕೋವಿಡ್ ಹಿನ್ನೆಲೆಯಲ್ಲಿ ನಡೆದಿರಲಿಲ್ಲ. ಹೀಗಾಗಿ ಆರು ವರ್ಷಗಳ ಬಳಿಕ ನಡೆಯುತ್ತಿರುವುದು ಭಕ್ತರಲ್ಲಿ ಹರ್ಷ ಮೂಡಿಸಿದೆ. ಈ ಧಾರ್ಮಿಕ ಆಚರಣೆಯಲ್ಲಿ ಭಾರಿ ಪ್ರಮಾಣದಲ್ಲಿ ಭಕ್ತ ಸಮೂಹ ಸೇರುವ ನಿರೀಕ್ಷೆ ಇದೆ.

ಕಾವೇರಿ, ಕಪಿಲೆ ಮತ್ತು ಸ್ಫಟಿಕ ಸರೋವರ ಈ ಮೂರು ನದಿಗಳು ಒಂದೇ ಸ್ಥಳದಲ್ಲಿ ಸೇರುವ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ 3 ಕಡೆ ಸ್ನಾನಘಟ್ಟ ವ್ಯವಸ್ಥೆ ಮಾಡಲಾಗುತ್ತಿದೆ. ಅಗಸ್ತ್ಯೇಶ್ವರ, ಗುಂಜಾ ನರಸಿಂಹಸ್ವಾಮಿ ಮತ್ತು ಭಿಕ್ಷೇಶ್ವರ ಸ್ವಾಮಿ ದೇವಾಲಯದ ಬಳಿ ಸ್ನಾನಘಟ್ಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಸುರಕ್ಷಿತ ದೃಷ್ಟಿಯಿಂದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ನದಿಯಲ್ಲಿ ಬೆಳೆದಿದ್ದ ಗಿಡಗಂಟಿ, ಜೊಂಡು ತೆರವು ಮಾಡಲಾಗಿದೆ. ಸದ್ಯಕ್ಕೆ ನದಿಯಲ್ಲಿ ನೀರು ಹೆಚ್ಚಿರುವುದರಿಂದ 6 ಅಡಿಯಷ್ಟು ಆಳವಿದೆ. ಇದರಿಂದ ವಯಸ್ಸಾದವರು ಮತ್ತು ಮಕ್ಕಳಿಗೆ ಅಪಾಯವಾಗದಂತೆ ಕ್ರಮ ವಹಿಸಲಾಗಿದೆ. 3 ಅಡಿ ಆಳದವರೆಗೆ ಹೋಗಿ ಜನರು ಸ್ನಾನ ಮಾಡ ಅವಕಾಶ ಮಾಡಿಕೊಡಲಾಗುತ್ತದೆ. 3 ಅಡಿ ಆಳದ ನಂತರ ಬ್ಯಾರಿಕೇಡ್ ನಿರ್ಮಿಸಿ, ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಈ ಬಾರಿ ತೇಲುವ ಸೇತುವೆ ನಿರ್ಮಾಣ ಮಾಡುತ್ತಿಲ್ಲ.

15ಕ್ಕೂ ಹೆಚ್ಚು ಬೋಟ್ ಬಳಕೆ

ಮೂರು ದಿನಗಳ ಕಾಲ ನಡೆಯುವ ಕುಂಭಮೇಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ 15ಕ್ಕೂ ಹೆಚ್ಚು ಬೋಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ರಂಗನತಿಟ್ಟು ಪಕ್ಷಿಧಾಮದಿಂದ 2, ಸ್ಥಳೀಯವಾಗಿ 12 ಹಾಗೂ ರೆಸಾರ್ಟ್‌ಗಳಿಂದ 4 ಬೋಟ್‌ಗಳನ್ನು ಪಡೆದುಕೊಳ್ಳಲಾಗಿದೆ. ವಿವಿಧ ಭಾಗಗಳಿಂದ ನುರಿತ ಈಜು ತಜ್ಞರನ್ನು ನಿಯೋಜಿಲಾಗುತ್ತಿದೆ.

ಮೂಲಸೌಲಭ್ಯಕ್ಕೆ ಒತ್ತು

ಮೂರು ದಿನಗಳ ಕಾಲ ನಡೆಯುವ ಕುಂಭಮೇಳದಲ್ಲಿ ನಿತ್ಯವೂ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದೆ. ಈ ಸಂದರ್ಭ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಮೂರು ಕಡೆ ಇರುವ ಸ್ನಾನಘಟ್ಟಗಳಲ್ಲಿ ಬಟ್ಟೆ ಬದಲಿಸಲು 20 ತಾತ್ಕಾಲಿಕ ಕೊಠಡಿ ನಿರ್ಮಾಣ ಮಾಡಲಾಗಿದೆ. ಪ್ರತಿ ಸ್ನಾನ ಘಟ್ಟದ ಬಳಿ 10 ಶೌಚಗೃಹ ನಿರ್ಮಿಸಲಾಗುತ್ತಿದೆ. ಕಾಲ್ತುಳಿತ ಉಂಟಾಗದಂತೆ ಪ್ರತ್ಯೇಕವಾಗಿ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತ್ರಿವೇಣಿ ಸಂಗಮದ ಬಳಿ ವಾಹನ ಸಂಚಾರ ನಿಷೇಧಿಸಲಾಗಿದೆ. ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ವಾರಾಣಸಿ ಮಾದರಿ ದೀಪಾರತಿ

ಕುಂಭಮೇಳದ ಎರಡನೇ ದಿನ ಫೆ.11ರಂದು ಸಂಜೆ ಸಂಗಮದಲ್ಲಿ ವಾರಾಣಸಿಯಲ್ಲಿ ಗಂಗಾನದಿಗೆ ನಡೆಯುವ ಗಂಗಾರತಿಯ ಮಾದರಿಯಲ್ಲಿ ಮಹಾ ಆರತಿ ನಡೆಯಲಿದೆ.

ಈ ಬಾರಿಯ ಕುಂಭಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ. ಅದಕ್ಕಾಗಿ ಸಂಗಮ ಸ್ಥಳದ 3 ಕಡೆ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳ್ಳಿ ರಥದ ಮೂಲಕ ಸಂತರು, ಮಠಾಧೀಶರ ಮೆರವಣಿಗೆ ಇರಲಿದೆ. ಸಂಕಲ್ಪ ಹೋಮ, ಅಗಸ್ತೇಶ್ವರನಿಗೆ ರುದ್ರಾಭಿಷೇಕ, ಅನುಜ್ಞೆ, ಧ್ವಜಾರೋಹಣ, ಹೋಮ-ಹವನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳು ನೆರವೇರಲಿವೆ.

ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ 6 ವರ್ಷಗಳ ಬಳಿಕ ಫೆ.10 ರಿಂದ 12ರವರೆಗೆ ನಡೆಯಲಿರುವ ಕುಂಭಮೇಳಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕುಂಭಮೇಳದಲ್ಲಿ ಜನರು ಮುಳುಗಿ ಅಥವಾ ನೀರಿನಲ್ಲಿ ಕೊಚ್ಚಿ ಹೋಗದಂತೆ ಮುಂಜಾಗ್ರತಾ ಕ್ರಮವಾಗಿ 15ಕ್ಕೂ ಹೆಚ್ಚು ಬೋಟ್‌ಗಳನ್ನು ನಿಯೋಜಿಸಲಾಗುತ್ತಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಭದ್ರತೆ ದೃಷ್ಟಿಯಿಂದ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಬಳಕೆ ಮಾಡಿಕೊಳ್ಳಲಿದ್ದೇವೆ. ರಕ್ಷಿತ್ ಕುಂಭಮೇಳದ ನೋಡಲ್ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net