ನಾಯಕನಹಟ್ಟಿಯಲ್ಲಿ ಕುಂಭಮೇಳ

NYK KUMBHA
Published on

ನಾಯಕನಹಟ್ಟಿ: ಕಡೇ ಶ್ರಾವಣ ಪ್ರಯುಕ್ತ ಪುಣ್ಯ ಕ್ಷೇತ್ರ ನಾಯಕನಹಟ್ಟಿಯಲ್ಲಿ ಶುಕ್ರವಾರ 101 ಕುಂಭಗಳ ಕುಂಭಮೇಳ, ಕುಂಭಾಭಿಷೇಕ ಮಹೋತ್ಸವ, ಶ್ರೀಗುರು ತಿಪ್ಪೇರುದ್ರಸ್ವಾಮಿಗೆ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ ಸಕಲ ಪೂಜಾ ವಿಧಿವಿಧಾನಗಳೊಂದಿಗೆ ವಾದ್ಯಗಳು ಹಾಗೂ ದೇಗುಲದ ಬಾವುಟದೊಂದಿಗೆ ಹೊರಮಠಕ್ಕೆ ಬರಲಾಯಿತು. ಹೊರಮಠದ ಪ್ರಾಂಗಣದಲ್ಲಿ ದೇವಸ್ಥಾನ ಸಮಿತಿಯವರು, ಗ್ರಾಮಸ್ಥರು ಕುಂಭಗಳಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಮಹಿಳೆಯರು ಉಪವಾಸ ವ್ರತ ನಡೆಸಿ, ಕುಂಭಗಳಿಗೆ ವಿಶೇಷವಾಗಿ ಅಲಂಕರಿಸಿ ಪೂಜೆ ಮಾಡಿದರು. ನಂತರ ಅರಳಿ ಮರಕ್ಕೆ ಪೂಜೆ ಸಲ್ಲಿಸಿ ಪಟ್ಟಣದ ರಥಬೀದಿಯಲ್ಲಿ ಸಕಲ ಜಾನಪದ ವಾದ್ಯಗಳೊಂದಿಗೆ ಒಳಮಠಕ್ಕೆ ಬಂದು ಪೂಜೆ ಸಲ್ಲಿಸಿದರು. ವೀರಗಾಸೆ ನೃತ್ಯ ಎಲ್ಲರ ಗಮನ ಸೆಳೆಯಿತು.

ಈ ಬಾರಿಯ ಶ್ರಾವಣ ಮಾಸದಲ್ಲಿ ಮೂರು ಲಕ್ಷಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಆಗಸ್ಟ್ 17ರಿಂದ ಸೆ.15ರ ವರೆಗೆ ದಾಸೋಹಕ್ಕೆ 222 ಪ್ಯಾಕೆಟ್ ಅಕ್ಕಿ, 10 ಕ್ವಿಂಟಾಲ್ ಬೇಳೆ, 6 ಕ್ವಿಂಟಾಲ್ ಬೆಲ್ಲ, 450 ಕೆಜಿ ರವೆ, 100 ಕೆಜಿ ಸಾಂಬಾರ್ ಪೌಡರ್ ಸೇರಿ ಹಲವು ದಿನಸಿಗಳನ್ನು ಬಳಸಲಾಗಿದ್ದು. 1.5 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಶ್ರಾವಣ ಮಾಸದ ಕಡೆಯ ದಿನದ ನಿಮಿತ್ತ ದಾಸೋಹದಲ್ಲಿ ಲಾಡು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net