ಮೈಸೂರು: ಆಧುನಿಕತೆೆಯ ಅಣಕಾಗಿರುವ ಪ್ರಯಾಗ್‌ರಾಜ್‌ನ ಕುಂಭಮೇಳವನ್ನೇ ನಮ್ಮ ಪರಂಪರೆ, ಇತಿಹಾಸ ಎಂದು ನಂಬಿಸಲಾಗುತ್ತಿದೆ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಟೀಕಿಸಿದರು.
ದಲಿತ ಸಾಹಿತ್ಯ ಪರಿಷತ್ತು, ದಲಿತ ವಿದ್ಯಾರ್ಥಿ ಸಂಘದಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜ್ಯೋತಿಬಾಫುಲೆ, ಸಾವಿತ್ರಿಬಾಯಿ, ಫಾತಿಮಾಶೇಕ್ ಹಾಗೂ ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿ ಪ್ರದಾನ, ಹಾರೋಹಳ್ಳಿ ರವೀಂದ್ರ ಅವರ ಸಾಂಸ್ಕೃತಿಕ ರಾಜಕಾರಣ, ಇಡಬ್ಲುೃಎಸ್ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಯಾಗ್‌ರಾಜ್‌ನಲ್ಲಿ ಈಗ ನಡೆಯುತ್ತಿರುವ ಕುಂಭಮೇಳದಲ್ಲಿ ಅಧ್ಯಾತ್ಮಿಕತೆ ಎಲ್ಲಿದೆ? ಈ ಕುಂಭಮೇಳವೂ ಆಧುನಿಕತೆಯ ಅಣಕ ಹಾಗೂ ಅವೈಜ್ಞಾನಿಕ. ನೀರಲ್ಲಿ ಮುಳುಗಿದ ಮಾತ್ರಕ್ಕೆ ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ಬಸವಣ್ಣ, ಪುರಂದರದಾಸರು ಹೇಳಿದ್ದಾರೆ. ಆದರೆ ಇದನ್ನೇ ನಮ್ಮ ಪರಂಪರೆ, ಇತಿಹಾಸ ಎಂದು ನಂಬಿಸಲಾಗುತ್ತಿದೆ ಎಂದರು.
ಕುಂಭಮೇಳದಲ್ಲಿ ಮೊದಲೆಲ್ಲ ಪುರುಷರು ನಗ್ನರಾಗುತ್ತಿದ್ದರು. ಈಗ ಮಹಿಳೆಯರು ನಗ್ನರಾಗುತ್ತಿದ್ದಾರೆ. ಸಾಧುಗಳಲ್ಲಿ ಹೊಡೆದಾಟ, ಜಗಳ ಕಾಣುತ್ತಿದ್ದೇವೆ. ಕೋಪ, ದ್ವೇಷ ಅಳಿಸಿಕೊಳ್ಳದವರೆಲ್ಲ ಯಾವ ರೀತಿ ಸನ್ಯಾಸಿಗಳಾದರು?. ಶವ ತಿನ್ನುವುದು, ಶವ ಸಂಭೋಗ ಮಾಡುವುದೆಲ್ಲ ಅಧ್ಯಾತ್ಮದ ಕೆಲಸಗಳಲ್ಲ ಎಂದು ತಿಳಿಸಿದರು.
ಕುಂಭಮೇಳದಲ್ಲಿ ನಡೆಯುವ ಅಪಸವ್ಯಗಳನ್ನೇ ಸಂಸ್ಕೃತಿ, ಇದೇ ಶ್ರೇಷ್ಠ ಎಂದು ಬಿಂಬಿಸುವುದು ತಪ್ಪು ಮತ್ತು ಆಧುನಿಕತೆಯ ಅಣಕುವೂ ಹೌದು. ಇವುಗಳಿಂದ ಭಾರತ ವಿಶ್ವಗುರುವಾಗಲೂ ಸಾಧ್ಯವೇ?. ಇದ್ನನ್ನೆಲ್ಲ ನೋಡಿದರೆ ದೇಶ ಎತ್ತ ಸಾಗುತ್ತಿದೆ ಎಂದು ಪ್ರಶ್ನಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ದಲಿತ ಚಳವಳಿಯ ಮೂಲಕ ದಲಿತ ಸಾಹಿತ್ಯವೂ ಬೆಳೆದು ಬಂದಿದೆ. ಆದರೆ ಇತ್ತೀಚಿನ ಬೆಳವಣಿಗೆಗಳು ಸಾಹಿತ್ಯ ಹಾಗೂ ಚಳವಳಿಗೂ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿನ ದಿನದಲ್ಲಿ ಸಂವಿಧಾನಕ್ಕೆ ಅಪಚಾರ ಮಾಡುವ ಹಾಗೂ ಸಂವಿಧಾನದ ಆಶಯಗಳನ್ನು ತೆರೆಮರೆಗೆ ಸರಿಸುವ ದೊಡ್ಡ ಹುನ್ನಾರ ನಡೆಯುತ್ತಿದೆ. ಹಾಗಾಗಿ ದಸಂಸ ಎಲ್ಲ ಬಣಗಳು ಒಂದು ವೇದಿಕೆಗೆ ಬರುವ ಜರೂರಿದೆ. ಇದರಿಂದ ದಲಿತ ಸಾಹಿತ್ಯವೂ ಬೆಳೆಯಬೇಕಿದೆ ಎಂದು ಸಲಹೆ ನೀಡಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಅಂಬೇಡ್ಕರ್ ಉಳಿದರೆ ದೇಶ ಉಳಿಯುತ್ತದೆ. ನಾವೆಲ್ಲ ಉಳಿಯುತ್ತೇವೆ. ಇಲ್ಲದಿದ್ದರೆ ಜೀತಗಾರಿಕೆ ಪದ್ಧತಿಗೆ ಹೋಗಬೇಕಾಗುತ್ತದೆ. ಹಾಗಾಗಿ ಬಾಬಾ ಸಾಹೇಬರ ಬಗ್ಗೆ ಮಾತಾಡಲು, ಸತ್ಯವನ್ನು ಹೇಳಲು ಹೆದರುವವರು ಅಂಬೇಡ್ಕರ್‌ವಾದಿಗಳಲ್ಲ ಎಂದರು.
ಚಿಂತಕ ಶಿವಸುಂದರ್ ಕೃತಿಗಳನ್ನು ಕುರಿತು ಮಾತನಾಡಿದರು. ಕೆಂಪಯ್ಯ, ಡಾ.ವಿಜಯಲಕ್ಷ್ಮೀ ಮಾನಾಪುರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ನರೇಂದ್ರ ನಾಗವಾಲ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಸಹಾಯಕ ಪ್ರಾಧ್ಯಾಪಕ ಡಾ.ಸಿ.ರಂಗಸ್ವಾಮಿ ಪ್ರಶಸ್ತಿ ಪುರಸ್ಕೃತರನ್ನು ಕುರಿತು ಮಾತನಾಡಿದರು. ಪ್ರಕಾಶಕ ಶ್ರೀಧರ ಅಘಲಯ, ಡಾ.ಚಂದ್ರಗುಪ್ತ, ಡಾ.ರಂಗಸ್ವಾಮಿ ಕಾಳಿಹುಂಡಿ, ಎಚ್.ಪಿ.ವಿಶ್ವಪ್ರಸಾದ್ ಇತರರು ಇದ್ದರು.