

ಮಂಡ್ಯ: ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಣ್ಮರೆಯಾಗಿರುವ ರಾಘವೇಂದ್ರ ಎಂಬ ಯುವಕ ನಾಪತ್ತೆಯಾಗಿದ್ದು, ಆತನನ್ನು ಪತ್ತೆ ಮಾಡುವಲ್ಲಿ ಪೊಲೀಸರು ನಿರ್ಲಕ್ಷೃ ವಹಿಸಿದ್ದಾರೆ ಎಂದು ಆರೋಪಿಸಿ ಕುಂಬಾರ ಜಾಗೃತಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಸರ್‌ಎಂವಿ ಪ್ರತಿಮೆ ಎದುರು ವೇದಿಕೆ ಕಾರ್ಯಕರ್ತರು ಹಾಗೂ ಕಣ್ಮರೆಯಾಗಿರುವ ಯುವಕನ ಸ್ವಗ್ರಾಮ ಸುಗ್ಗನಹಳ್ಳಿ ಗ್ರಾಮಸ್ಥರು ಕೆಲ ಕಾಲ ಧರಣಿ ನಡೆಸಿ ಮೆರವಣಿಗೆ ಹೊರಟು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೂ ತೆರಳಿದ ಪ್ರತಿಭಟನಾಕಾರರು ನ್ಯಾಯಕೋರಿ ಮನವಿ ಮಾಡಿದರು.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಶಿವಕುಮಾರ್ ಪುತ್ರ ರಾಘವೇಂದ್ರ ಕೃಷ್ಣರಾಜಸಾಗರದ ಕೇರಳಾಪುರ ಹಿಂದು ಮಿಲ್ಟ್ರಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದನು. ರಾತ್ರಿ ವೇಳೆ ಅಲ್ಲೇ ಉಳಿದುಕೊಳ್ಳುತ್ತಿದ್ದ ಆತ ಆ.10 ರಂದು ಕಣ್ಮರೆಯಾಗಿದ್ದಾನೆ ಎಂದು ಹೋಟೆಲ್ ಮಾಲೀಕ ಉಮೇಶ್ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮರುದಿನ ಕೃಷ್ಣರಾಜಸಾಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಲಾಗಿದೆ. ಆದರೆ ಪೊಲೀಸರು ಪ್ರಕರಣವನ್ನು ಸಮರ್ಪಕವಾಗಿ ತನಿಖೆ ಮಾಡಲು ಮುಂದಾಗಿಲ್ಲ. ಪೊಲೀಸರು ಬಂಧಿಸಿದ ವ್ಯಕ್ತಿಯೊಬ್ಬ ರಾಘವೇಂದ್ರ ಈಜಲು ಹೋಗಿದ್ದಾಗ ಮುಳುಗಿ ಸತ್ತಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಮೃತ ದೇಹ ಪತ್ತೆಯಾಗಿರುವುದಿಲ್ಲ ಎಂದು ವಿವರಿಸಿದರು.
ಆದರೆ ಪೊಲೀಸರು ವಾಸ್ತವವನ್ನು ಮರೆಮಾಚುತಿದ್ದಾರೆ. ಹೋಟೆಲ್ ಮಾಲೀಕ ಉಮೇಶ್, ಆತನ ಪತ್ನಿ ಹೇಮಲತಾ, ಅಳಿಯ ಹಾಗೂ ಹೋಟೆಲ್ ಕಾರ್ಮಿಕಳಾದ ಜಯಮ್ಮ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದ್ದರೂ ಸಹ ಇವರನ್ನು ವಿಚಾರಣೆ ಮಾಡಿಲ್ಲ. ರಾಘವೇಂದ್ರ ಬದುಕಿರುವ ಸಾಧ್ಯತೆ ಇಲ್ಲವಾಗಿದ್ದು, ಆತನನ್ನು ಹೋಟೆಲ್ ಮಾಲಿಕ ಮತ್ತು ಕುಟುಂಬದವರು ಕೊಲೆ ಮಾಡಿರುವ ಸಾಧ್ಯತೆ ಇದೆ. ಆದ್ದರಿಂದ ಅವರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲು ಮಾಡಿ ಬಂಧಿಸಿ ತನಿಖೆ ನಡೆಸಿ ಯುವಕನ ಮೃತದೇಹವನ್ನು ಪತ್ತೆ ಮಾಡಿ ಸತ್ಯ ಸತ್ಯಾತೆಯನ್ನು ಬಯಲು ಮಾಡಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವುದರ ಜತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮನವಿ ಸ್ವೀಕರಿಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೊಸದಾಗಿ ತನಿಖಾಅಧಿಕಾರಿ ನಿಯೋಜಿಸಿ ತನಿಖೆ ನಡೆಸುವ ಮೂಲಕ ಆರೋಪಿಗಳ ಪತ್ತೆಗೆ ಮುಂದಾಗಲಾಗುವುದೆಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕುಂಬಾರ ಜಾಗೃತಿ ವೇದಿಕೆ ಗೌರವಾಧ್ಯಕ್ಷ ದಾಸಶೆಟ್ಟಿ, ಅಧ್ಯಕ್ಷ ಎಂ.ಕೃಷ್ಣ, ಮೈಸೂರು ಜಿಲ್ಲಾಧ್ಯಕ್ಷ ಪ್ರಕಾಶ್, ವೆಂಕಟೇಶ್, ಶಾಂತರಾಜು, ಕೆಂಪರಾಜು, ಕುಮಾರ್, ಎಲ್.ಸಂದೇಶ್, ಯುವಕನ ತಂದೆ ಶಿವಕುಮಾರ್, ತಾಯಿ ಗೌರಮ್ಮ ಇತರರಿದ್ದರು.