ಕುಂಭಮೇಳಕ್ಕೆ ಜಿಲ್ಲಾಡಳಿತದಿಂದ ಸಿದ್ಧತೆ: ಜಿಲ್ಲಾಧಿಕಾರಿ ಎಸ್.ಅಶ್ವಥಿ ಹೇಳಿಕೆ

kumbamela
Published on

ಕೆ.ಆರ್.ಪೇಟೆ: ತಾಲೂಕಿನ ಅಂಬಿಗರಹಳ್ಳಿಯಲ್ಲಿ ಅ.13 ರಿಂದ 16 ನಡೆಯಲಿರುವ ಕುಂಭಮೇಳ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ತಿಳಿಸಿದರು.

ಶನಿವಾರ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂಭಮೇಳದ ವೇದಿಕೆ, ಯಾಗಶಾಲೆ, ಪಾಕ ಶಾಲೆ, ಸ್ನಾನದ ಘಟ್ಟ, ವಿಶ್ರಾಂತಿ ಗೃಹ, ಭದ್ರತಾ ವ್ಯವಸ್ಥೆ ಸರಿಯಾಗಿ ಆಗಬೇಕು. ವಿಐಪಿ, ಅಧಿಕಾರಿಗಳು ಹಾಗೂ ಜನರ ವಾಹನಗಳ ಪಾರ್ಕಿಂಗ್ ಸುರಕ್ಷಿತವಾಗಿ ಮಾಡಲು ಸ್ಥಳವನ್ನು ನಿಗದಿಪಡಿಸಬೇಕು. ಪಾರ್ಕಿಂಗ್ ವ್ಯವಸ್ಥೆಗಳ ಸುತ್ತಮುತ್ತಲಿನಲ್ಲಿ ಸಂಪೂರ್ಣ ಸ್ವಚ್ಛತೆಯಾಗಬೇಕು. ಲೈಟಿಂಗ್ಸ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಕುಂಭಮೇಳಕ್ಕೆ ಬರುವ ಭಕ್ತರಿಗೆ ಊಟದ ವ್ಯವಸ್ಥೆಗಾಗಿ 100 ಕೌಂಟರ್‌ಗಳನ್ನು ತೆರೆಯಲಾಗುವುದು. ಆದ್ದರಿಂದ ಉಟೋಪಚಾರಕ್ಕೆ ಯಾವುದೇ ಕೊರತೆಯಾಗದಂತೆ ಕ್ರಮ ವಹಿಸಬೇಕು. ಸ್ನಾನಘಟ್ಟದಲ್ಲಿ ಸುರಕ್ಷತಾ ಸ್ಥಳಗಳನ್ನು ಗುರುತಿಸುವುದರ ಜತೆಗೆ ಈಜುಗಾರರನ್ನು ನಿಯೋಜಿಸಬೇಕು. ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರನ್ನು ಪಾಳಿಯಲ್ಲಿ ನಿಯೋಜಿಸಿ. ಸೋಮನಹಳ್ಳಿಯಿಂದ ತ್ರಿವೇಣಿ ಸಂಗಮದವರೆಗೆ ಭಕ್ತರನ್ನು ಕರೆದುಕೊಂಡು ಹೋಗಲು ಮತ್ತು ಬರಲು ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಕಿಂಗ್, ಅಡುಗೆ ಮಾಡುವ ಸ್ಥಳಗಳಲ್ಲಿ ಹಾಗೂ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ತಿಳಿಸಿದರು.

ವಸತಿ ಸಮಿತಿ, ಆಹಾರ ಸಮಿತಿ, ಕುಡಿಯುವ ನೀರು ಸಮಿತಿ, ಸ್ವಚ್ಛತಾ ಸಮಿತಿ, ಪ್ರದರ್ಶನ ಸಮಿತಿ, ಪ್ರಚಾರ ಸಮಿತಿ, ರಕ್ಷಣೆ ಸಮಿತಿ, ವೇದಿಕೆ ನಿರ್ಮಾಣ ಹಾಗೂ ದೀಪಾಲಂಕಾರ ಸಮಿತಿಗೆ ನಿರ್ವಹಿಸಿರುವ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಮುಗಿಸಬೇಕು. ಸ್ವಚ್ಚತೆ, ರಸ್ತೆ ಕಾಮಗಾರಿ ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಶೀಘ್ರದಲ್ಲೇ ಪೂರ್ಣಮಾಡಿ ಕುಂಭಮೇಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕ್ರಮವಹಿಸಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಆಪ್ತ ಕಾರ್ಯದರ್ಶಿ ಎಚ್.ಜಿ.ಪ್ರಭಾಕರ್, ಉಪವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದಮೂರ್ತಿ, ಆರ್.ಐಶ್ವರ್ಯಾ, ತಹಸೀಲ್ದಾರ್ ಎಂ.ವಿ.ರೂಪಾ, ಜಿ.ಪಂ ಉಪಕಾರ್ಯದರ್ಶಿ ಸಂಜೀವಪ್ಪ, ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಪ್ರಸಾದ್, ಸಣ್ಣಸ್ವಾಮಿಗೌಡ ಇತರರಿದ್ದರು.

ಪರಿಶೀಲನೆ: ಇದೇ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿರುವ ಬೃಹತ್ ವೇದಿಕೆ ಹಾಗೂ ಇನ್ನಿತರ ಸಣ್ಣ ಪುಟ್ಟ ಕಾಮಗಾರಿಗಳನ್ನು ವೀಕ್ಷಿಸಿ ಬಾಕಿ ಉಳಿದಿರುವ ಕೆಲಸಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net