

ಮಂಡ್ಯ: ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿ ಸಮೀಪದ ತ್ರಿವೇಣಿ ಸಂಗಮದಲ್ಲಿ ಅ.13 ರಿಂದ 16 ರವರೆಗೆ ಕುಂಭಮೇಳ ಅದ್ಧೂರಿಯಾಗಿ ನಡೆಯಲಿದೆ. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂರು ನದಿಗಳ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ಪೂಜೆ ಹಾಗೂ ಬಾಗಿನ ಸಮರ್ಪಣೆ ಮಾಡಲಾಗುತ್ತದೆ. ಸಾಧು ಸಂತರು ಹಾಗೂ ಗಣ್ಯರಿಂದ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ರಸ್ತೆ, ಶೌಚಗೃಹ, ವಾಹನ ನಿಲ್ದಾಣ, ಕುಡಿಯುವ ನೀರು, ಉಪಾಹಾರ, ನೈರ್ಮಲ್ಯ, ತಂಗುದಾಣ, ವೈದ್ಯಕೀಯ ಸೇವೆ ಮತ್ತು ತುರ್ತು ಚಿಕಿತ್ಸೆ, ಅಗ್ನಶಾಮಕದಳ, ರಕ್ಷಣಾ ಕಾರ್ಯ, ವಿದ್ಯುಯ್ ದೀಪಾಲಂಕಾರ, ಮಾಹಿತಿ ಕೇಂದ್ರ ಗಳ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಅ.6 ರಂದು ಮಲೈ ಮಹದೇಶ್ವರ ಬೆಟ್ಟದಲ್ಲಿ ವಿಶೇಷವಾಗಿ ಜ್ಯೋತಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗುತ್ತದೆ. ಮಹದೇಶ್ವರ ಜ್ಯೋತಿ ಯಾತ್ರೆ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಿ ಕೆ.ಆರ್.ಪೇಟೆಯ ತ್ರಿವೇಣಿ ಸಂಗಮಕ್ಕೆ ಬರಲಿದೆ. ಯಾತ್ರೆ ಸಂಚರಿಸುವ ಮೂರು ಮಾರ್ಗಕ್ಕೆ ಸಂಬಂಧಿಸಿದಂತೆ ಮಾರ್ಗ ಅಧಿಕಾರಿಗಳನ್ನು ನೇಮಿಸಲಾಗಿದೆ. ಭಕ್ತರು ನೀಡುವ ದವಸ ಧಾನ್ಯಗಳನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಗಂಗಾರತಿ, ಸಾಧು ಸಂತರ ಧಾರ್ಮಿಕ ಸಭೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಎಸ್ಪಿ ಎನ್.ಯತೀಶ್, ಎಸಿಗಳಾದ ಶಿವಾನಂದಮೂರ್ತಿ, ಆರ್.ಐಶ್ವರ್ಯಾ, ಜಿಪಂ ಉಪಕಾರ್ಯದರ್ಶಿ ಸರಸ್ವತಿ ಇತರರಿದ್ದರು.