

ಬಂಟ್ವಾಳ: ಕುಂಬಳೆ ಶ್ರೀಧರ ರಾಯರ ಪಾತ್ರಗಳಲ್ಲಿ ಪಾತ್ರವು ಬಯಸುವ ರಸಾಭಿವ್ಯಕ್ತಿಯು ತುಂಬಾ ಸಶಕ್ತವಾಗಿ ಎದ್ದು ಕಾಣುತ್ತಿತ್ತು. ಅವರು ಕಡೆದ ಪಾತ್ರಗಳೆಲ್ಲವೂ ಕಿರಿಯರಿಗೆ ಪಠ್ಯವಿದ್ದಂತೆ ಎಂದು ಕಲಾವಿದ, ಲೇಖಕ ನಾ.ಕಾರಂತ ಪೆರಾಜೆ ಹೇಳಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ವತಿಯಿಂದ ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಹಿರಿಯರ ನೆನಪು ಕಾರ್ಯಕ್ರಮದಲ್ಲಿ ಕುಂಬಳೆ ಶ್ರೀಧರ ರಾವ್ ಕಲಾಯಾನ ಬಗ್ಗೆ ಮಾತನಾಡಿದರು.
ಕ್ಷೇತ್ರದ ಅಧ್ಯಕ್ಷ ಈಶ್ವರ ಭಟ್ ರಾಕೋಡಿ ಉದ್ಘಾಟಿಸಿದರು. ಯಕ್ಷಗಾನ ಅಕಾಡೆಮಿಯ ಸದಸ್ಯ ಕೃಷ್ಣಪ್ಪ ಕಿನ್ಯ, ಅರ್ಥದಾರಿ ಗುಂಡ್ಯಡ್ಕ ಈಶ್ವರ ಭಟ್, ಮಜಿಬೈಲು ವಿಷ್ಣು ಯಕ್ಷ ಬಳಗದ ಸಂಚಾಲಕ ಹರೀಶ ನಾವಡರು ಉಪಸ್ಥಿತರಿದ್ದರು.
ವಿಶ್ವಭಾರತಿ ಯಕ್ಷಸಂಜೀವನಿ ಟ್ರಸ್ಟಿನ ಮುಖ್ಯಸ್ಥ ಪ್ರಶಾಂತ ಹೊಳ್ಳ ಸ್ವಾಗತಿಸಿದರು. ಯಕ್ಷಸಂಜೀವಿನಿ ಸದಸ್ಯರಿಂದ ದಕ್ಷಾಧ್ವರ ತಾಳಮದ್ದಳೆ ಸಂಪನ್ನಗೊಂಡಿತು. ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ರಾಮಮೂರ್ತಿ ಕುದ್ರೆಕೂಡ್ಲು, ಕೃಷ್ಣ ಚೈತನ್ಯ ಚೇರಾಲು, ಗೌತಮ ನಾವಡ ಮಜಿಬೈಲು ಹಿಮ್ಮೇಳದಲ್ಲಿ ಸಹಕರಿಸಿದರು. ಗುಂಡ್ಯಡ್ಕ ಈಶ್ವರ ಭಟ್, ನಾ.ಕಾರಂತ ಪೆರಾಜೆ, ಪ್ರಶಾಂತ ಹೊಳ್ಳ, ಹರೀಶ ನಾವಡ, ಪ್ರೇಮಕಿಶೋರ್, ಕುಶಲ ಮುಡಿಪು ಅರ್ಥದಾರಿಗಳಾಗಿದ್ದರು.