ನೆಪ ಹೇಳದೇ ಕಾಮಗಾರಿ ಪೂರ್ಣಗೊಳಿಸಿ

9-kmt- mla dinakar
Published on

ಕುಮಟಾ: ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766ಇ ಹಾಗೂ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿ ವಿಳಂಬಕ್ಕೆ ಇನ್ನೂ ನೆಪ ಹೇಳದೇ ಬೇಗ ಪೂರ್ಣಗೊಳಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಅವರು ಎರಡೂ ಕಾಮಗಾರಿ ನಿರ್ವಹಣೆಯ ಗುತ್ತಿಗೆ ಕಂಪನಿಗೆ ಹಾಗೂ ಅಧಿಕಾರಿಗಳಿಗೆ ಎಚ್ಚರಿಸಿದರು.

ತಾಲೂಕು ಸೌಧದ ಸಭಾಭವನದಲ್ಲಿ ಮಂಗಳವಾರ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು, ಆರ್​ಎನ್​ಎಸ್ ಮತ್ತು ಐಆರ್​ಬಿ ಕಂಪನಿಯ ಅಧಿಕಾರಿಗಳ ಸಭೆಯಲ್ಲಿ ಅವರು ನಡೆಸಿದರು.

ಕುಮಟಾ-ಶಿರಸಿ ರಸ್ತೆ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಗುತ್ತಿಗೆ ಕಂಪನಿಯವರನ್ನು ಶಾಸಕರು ತರಾಟೆ ತೆಗೆದುಕೊಂಡರು. ಕಾಮಗಾರಿಗೆ ಬೇಕಾದ ಜಲ್ಲಿ ಮುಂತಾದ ಕಚ್ಚಾ ಸಾಮಗ್ರಿಗಳನ್ನು ದೂರದ ಹಾನಗಲ್ ಕಡೆಗಳಿಂದ ತರಬೇಕಾಗಿದೆ. ಹಣ ಸಂದಾಯವಾಗದ್ದರಿಂದ ವಿಳಂಬವಾಗುತ್ತಿದೆ ಎಂದು ಆರ್​ಎನ್​ಎಸ್ ಕಂಪನಿಯವರು ತಿಳಿಸಿದಾಗ ಪ್ರತಿಕ್ರಿಯಿಸಿದ ಶಾಸಕ ಶೆಟ್ಟಿ, ನೀವು ಇಂಥ ಚಿಕ್ಕಪುಟ್ಟ ಕಾರಣ ಹೇಳುವ ಬದಲು ಮೊದಲು ರಸ್ತೆ ಕೆಲಸ ಮಾಡಿ. ನೀವೇ ಒಪ್ಪಿಕೊಂಡಂತೆ 2025ರ ಡಿಸೆಂಬರ್​ನೊಳಗೆ ಸಂಪೂರ್ಣ ಕಾಮಗಾರಿ ಮುಗಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಖಾಸಗಿಯವರಿಂದ ಭೂಸ್ವಾಧೀನಪಡಿಸಿಕೊಂಡ ಸ್ಥಳದಲ್ಲಿಯ ಮರಗಳ ಕಟಾವು ಕಾರ್ಯ ಬೇಗ ಮಾಡಬೇಕು. ನಿಗದಿಯಂತೆ ವರ್ಷಾಂತ್ಯದೊಳಗೆ ಶಿರಸಿ-ಕುಮಟಾ ರಸ್ತೆ ಕಾಮಗಾರಿ ಮುಗಿಯಬೇಕು ಎಂದರು.

ಬಳಿಕ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪ್ರಗತಿಯ ಬಗ್ಗೆ ಐಆರ್​ಬಿ ಅಧಿಕಾರಿಗಳು ಮತ್ತು ರಾಹೆ ಪ್ರಾಧಿಕಾರದ ಪಿ.ಡಿ ರವರೊಂದಿಗೆ ರ್ಚಚಿಸಿದರು. ಕುಮಟಾದಿಂದ ಹೊನ್ನಾವರವರೆಗೆ ಇರುವ ಮರಾಕಲ್ ಕುಡಿಯುವ ನೀರು ಯೋಜನೆಯ ಪೈಪ್ ಲೈನ್​ಗಳನ್ನು ತೆರವುಗೊಳಿಸಲು ಯಾವುದೇ ಟೆಂಡರ್ ಕರೆಯದೇ ಕೆಲಸ ಮಾಡಿದ್ದರಿಂದ ಸರ್ಕಾರದ ಕೋಟ್ಯಂತರ ರೂ. ವ್ಯಯವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಆಕ್ಷೇಪಿಸಿದರು. ಇದಕ್ಕೆ ಸಮರ್ಪಕವಾಗಿ ಉತ್ತರಿಸಲು ಎನ್​ಎಚ್​ಎಐ ಮತ್ತು ಐಆರ್​ಬಿ ಅಧಿಕಾರಿಗಳು ತಡಬಡಾಯಿಸಿದರು.ಸರ್ಕಾರದ ಕಡೆಯಿಂದ ಉಪವಿಭಾಗಾಧಿಕಾರಿಗಳು ಈ ಬಗ್ಗೆ ಕೂಲಂಕಷವಾಗಿ ಮಾಹಿತಿ ಮತ್ತು ದಾಖಲೆಗಳನ್ನು ಪಡೆದು ಪರಿಶೀಲಿಸಬೇಕು ಎಂದು ಸೂಚಿಸಿದ ಶಾಸಕ ದಿನಕರ ಶೆಟ್ಟಿ, ಸಾರ್ವಜನಿಕರ ತೆರಿಗೆ ಹಣ ಯಾರೂ ಲೂಟಿ ಮಾಡದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಎಂದರು.

ಸಭೆಯಲ್ಲಿ ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ, ಆರ್​ಎನ್​ಎಸ್ ಯೋಜನೆ ವ್ಯವಸ್ಥಾಪಕ ಆರ್.ಬಿ.ಪಾಟೀಲ, ಐಆರ್​ಬಿ ಯೋಜನೆ ನಿರ್ದೇಶಕ ಶ್ರೀನಿವಾಸ, ಇಂಜಿನಿಯರ್ ಮಲ್ಲಿಕಾರ್ಜುನ, ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ, ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ, ತಾಪಂ ಇಒ ಆರ್.ಎಲ್. ಭಟ್, ಕತಗಾಲ ಆರ್​ಎಫ್​ಒ ಪ್ರೀತಿ ನಾಯ್ಕ, ಕುಮಟಾ-ಶಿರಸಿ ರಸ್ತೆ ವ್ಯಾಪ್ತಿಗೊಳಪಟ್ಟ ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net