

ಕುಮಟಾ: ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಕಬ್ಬರ್ಗಿ ಗ್ರಾಮದ ಬೆಳ್ಳಂಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶಾಸಕ ದಿನಕರ ಶೆಟ್ಟಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಶಾಲೆಯಲ್ಲಿ 16 ವಿದ್ಯಾರ್ಥಿಗಳು ಓದುತ್ತಿದ್ದಾರೆ. ತಿಂಗಳ ಹಿಂದೆ ಬೆಳ್ಳಂಗಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಇದ್ದರು. ಈಗ ಒಬ್ಬ ಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಇನ್ನೊಬ್ಬರು ಅನಾರೋಗ್ಯದ ನಿಮಿತ್ತ ವೈದ್ಯಕೀಯ ರಜೆಯ ಲ್ಲಿದ್ದಾರೆ. ಹೀಗಾಗಿ, ಶಾಲೆಗೆ ಶಿಕ್ಷಕರಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಬೇರೆ ಶಾಲೆಯ ಒಬ್ಬ ಶಿಕ್ಷಕರು ಬಂದು ಪಾಠ ಮಾಡುತ್ತಿದ್ದಾರೆ. ಶಿಕ್ಷಕರ ಕೊರತೆಯ ಕಾರಣದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಇಬ್ಬರು ಶಿಕ್ಷಕರು ಪೂರ್ಣಾವಧಿ ಕಾರ್ಯನಿರ್ವಹಿಸದೆ ಇದ್ದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕುಂಟಾಗುತ್ತದೆ. ಆದ್ದರಿಂದ ಕೂಡಲೇ ನಮ್ಮ ಶಾಲೆ ಎದುರಿಸುತ್ತಿರುವ ಶಿಕ್ಷಕರ ಕೊರತೆಯನ್ನು ನೀಗಿಸಬೇಕು ಎಂದು ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದರು. ಶಾಸಕ ದಿನಕರ ಶೆಟ್ಟಿ ಅವರು, ಬಿಇಒ ಆರ್.ಎಲ್. ಭಟ್ ಅವರನ್ನು ಕರೆಸಿ ಚರ್ಚಿಸಿದರು. ಬಳಿಕ ಗ್ರಾಮಸ್ಥರ ಬೇಡಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ಸದ್ಯ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಇದಕ್ಕೆ ಹೊಸದಾಗಿ ಶಿಕ್ಷಕರ ನೇಮಕಾತಿಯೊಂದೇ ಪರಿಹಾರ. ಈ ಕುರಿತು ಶಿಕ್ಷಣ ಸಚಿವರೊಡನೆ ಮಾತನಾಡಿ, ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ, ಗ್ರಾಪಂ ಸದಸ್ಯ ದೇವು ಗೌಡ, ಎಸ್‌ಡಿಎಂಸಿ ಅಧ್ಯಕ್ಷ ಬಲಿಯ ಮಾರು ಗೌಡ, ಗ್ರಾಮಸ್ಥರಾದ ಮಾದೇವಿ ಮಂಜುನಾಥ ಗೌಡ, ದೇವಕಿ ದೇವು ಗೌಡ, ಸುರೇಶ ಹಮ್ಮಯ್ಯ ಪಟಗಾರ, ಅಶೋಕ ಶಿವರಾಮ ಉಪಾಧ್ಯ, ಗಣೇಶ ವೆಂಕಟರಮಣ ಮುಕ್ರಿ ಇತರರು ಇದ್ದರು.