

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಅ. 17ರಿಂದ 21 ರವರೆಗೆ ಹಮ್ಮಿಕೊಂಡಿರುವ ಕುಮಟಾ ವೈಭವ ಕಾರ್ಯಕ್ರಮದಲ್ಲಿ ಈ ಬಾರಿ ಜಿಲ್ಲೆಯ ಗೌಳಿಗರ ಕುಣಿತ, ಸಿದ್ಧಿ ಕುಣಿತ, ಕೋಲಾಟ, ಟಿಬೇಟಿಯನ್ ನೃತ್ಯ, ಭಜನಾ ಪದ ಇನ್ನಿತರ ಸ್ಥಳೀಯ ಕಲೆಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಜತೆಗೆ ರಾಜ್ಯದ ವಿವಿಧೆಡೆಯಿಂದ ಹೆಸರಾಂತ ಕಲಾವಿದರ ತಂಡವೂ ಪ್ರತಿನಿತ್ಯ ಮನೋರಂಜನೆಯೊಟ್ಟಿಗೆ ಕೆಲ ರಸದೌತಣ ನೀಡಲಿದೆ ಎಂದು ತಾಂಡವ ಕಲಾನಿಕೇತನದ ಸಂಸ್ಥಾಪಕ ಮಂಜುನಾಥ ನಾಯ್ಕ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಕಾರ್ಯಕ್ರಮದ ಆಮಂತ್ರಣ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ತಂದೆ ದಿ. ಲಿಂಗಪ್ಪ ನಾಯ್ಕ ಸ್ಮರಣೆಯಲ್ಲಿ ತಾಂಡವ ಕಲಾನಿಕೇತನದಡಿ 7ನೇ ಕುಮಟಾ ವೈಭವ ಕಾರ್ಯಕ್ರಮವನ್ನು ಈ ಬಾರಿ ವಿಭಿನ್ನವಾಗಿ ಪ್ರಸ್ತುತಪಡಿಸುವ ಗುರಿ ಹೊಂದಿದ್ದೇವೆ. ಸರಿಗಮಪ ಖ್ಯಾತಿಯ ತಂಡ ಹಾಗೂ ಹೆಸರಾಂತ ಕಲಾವಿದರಿಂದ ನಮ್ಮ ನಾಡಿನ ಮಾತ್ರವಲ್ಲದೆ, ದೇಶವಿದೇಶದ ಕಲೆ, ಸಂಗೀತ, ನೃತ್ಯದ ಪ್ರದರ್ಶನವೂ ಮೇಳೈಸಿದ್ದೇವೆ. ಮಿಮಿಕ್ರಿ ದಯಾನಂದ, ರಿಚರ್ಡ್ ಲೂಯಿಸ್ ಮುಂತಾದ ಹಾಸ್ಯಕಲಾವಿದರಿಂದ ನಗೆಹಬ್ಬವೂ ಇರಲಿದೆ. ಸಾರ್ವಜನಿಕರು ಪ್ರತಿವರ್ಷದಂತೆ ಈ ವರ್ಷವೂ ಬಂದು ಪ್ರೋತ್ಸಾಹಿಸಬೇಕು ಎಂದರು.
ಕುಮಟಾ ವೈಭವ ಸಮಿತಿ ಅಧ್ಯಕ್ಷ ಆರ್.ಎಚ್. ನಾಯ್ಕ ಮಾತನಾಡಿ, ಅ. 17ರಂದು ಸಂಜೆ 8-30ಕ್ಕೆ ದಿ.ಲಿಂಗಪ್ಪ ನಾಯ್ಕ ವೇದಿಕೆಯಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿವೇದಿತ್ ಆಳ್ವಾ ಚಾಲನೆ ನೀಡಲಿದ್ದಾರೆ ಎಂದರು.
ಎಂ.ಎಚ್. ನಾಯ್ಕ, ಸಂತೋಷ ನಾಯ್ಕ, ಗಣಪತಿ ನಾಯ್ಕ, ಹರೀಶ ಶೇಟ, ಕೃಷ್ಣ ಪಟಗಾರ, ಮಹೇಶ ರ್ಕಕರ, ಮಂಜುನಾಥ ಭಂಡಾರಿ, ದಿನೇಶ ನಾಯ್ಕ, ಸಚಿನ ನಾಯ್ಕ, ಇತರರಿದ್ದರು.