3 ದಶಕದಲ್ಲಿ 10 ಸಾವಿರ ಸಸ್ಯಾರೋಪಣ

15-kmt sayaropan
Published on

ಕುಮಟಾ: ತಾಲೂಕಿನ ಗಡಿಭಾಗ ಬ್ರಹ್ಮೂರಿನಲ್ಲಿ ಪ್ರಗತಿಶೀಲ ಕೃಷಿ ಕಾಯಕದೊಂದಿಗೆ ಅರಣ್ಯ ಸಂರಕ್ಷಣೆ ಮೇಳೈಸಿಕೊಂಡ ರೈತರೊಬ್ಬರು ಪರಿಸರ ಪ್ರೇಮಿ ಕೃಷಿ ಸಾಧಕರಾಗಿ ಗಮನ ಸೆಳೆದಿದ್ದಾರೆ.
ಬಡ ಕುಟುಂಬದಲ್ಲಿ ಜನಿಸಿ ಬೆಳೆದ ಬ್ರಹ್ಮೂರಿನ ಕೃಷ್ಣ ಶಂಕರ ಭಟ್ ಬಾಲ್ಯದಿಂದಲೂ ಕೃಷಿಯಲ್ಲಿ ಅಪಾರ ಆಸಕ್ತಿ ಉಳ್ಳವರು. ಇವರು ವಿದ್ಯೆ ಕಲಿತಿದ್ದು ಕಡಿಮೆಯಾದರೂ ಸ್ವಾನುಭವ ದೊಡ್ಡದು. ಕೃಷ್ಣ ಭಟ್ ತಮ್ಮ ಕೃಷಿ ಭೂಮಿಯಲ್ಲಿ ಸಾವಯವ ಪದ್ಧತಿಯಲ್ಲಿ ಅಡಕೆ, ತೆಂಗು, ಬಾಳೆ, ಕಾಳುಮೆಣಸು, ಲವಂಗ, ಜಾಯಿಕಾಯಿ ಹೀಗೆ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಾರೆ. ಜತೆಗೆ ಬಗೆಬಗೆಯ ತರಕಾರಿ, ಹಣ್ಣು-ಹಂಪಲು ಬೆಳೆದು, ತಾವು ಸವಿಯುವುದಲ್ಲದೇ ಗ್ರಾಮದಲ್ಲಿರುವವರಿಗೂ ಹಂಚುತ್ತಾರೆ. ಶಾಲೆಯ ಬಿಸಿಯೂಟಕ್ಕೂ ನೀಡುತ್ತಾರೆ.
ಸಾಮಾನ್ಯವಾಗಿ ಕೃಷಿಕರು ತಮ್ಮ ತೋಟ, ಗದ್ದೆಗಳಿಗಾಗಿ ಸುತ್ತಲಿನ ಬೆಟ್ಟ ಹಾಳು ಮಾಡುತ್ತಾರೆಂಬ ಅಪವಾದವಿದೆ. ಆದರೆ, ಕೃಷ್ಣ ಭಟ್ ತೋಟ, ಗದ್ದೆಯ ಸುತ್ತ ಅರಣ್ಯ ಸಂಪತ್ತು ಸಂಪದ್ಭರಿತವಾಗಿದ್ದರೆ ಹೆಚ್ಚು ಅನುಕೂಲ ಎಂಬುದನ್ನು ಮನಗಂಡು ತಮ್ಮ ಜಮೀನಿನ ಸುತ್ತಲೂ ವಿವಿಧ ಜಾತಿಯ ಮರಗಳನ್ನು ಬೆಳೆಸಲು ಆರಂಭಿಸಿ ಇದೀಗ ಮೂರು ದಶಕಗಳೇ ಕಳೆದಿವೆ.
ತೋಟದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಮಾವು, ಹಲಸು ಮುಂತಾದ ಹಣ್ಣಿನ ಗಿಡಗಳನ್ನು ಬೆಳೆಸಿದ್ದರಿಂದ ತೋಟಕ್ಕೆ ಕಾಡುಪ್ರಾಣಿಗಳ ಕಾಟ ಕಡಿಮೆಯಾಗಿದೆ. ಇದಲ್ಲದೆ, ತಮ್ಮ ಜಮೀನಿನಲ್ಲಿ ಸುಮಾರು 50 ತಳಿಯ ಮಾವಿನ ಗಿಡಗಳನ್ನು ಬೆಳೆದಿದ್ದಾರೆ. ಹತ್ತು ಬಗೆಯ ಹಲಸಿನ ಗಿಡ, ಪೇರಲ, ಪನ್ನೇರಲು, ಸೇಬು, ಸ್ಟ್ರಾಬೆರಿ ಮುಂತಾದ ಹಣ್ಣಿನ ಗಿಡಗಳನ್ನು ಇಲ್ಲಿ ಕಾಣಬಹುದು. ಇವರ ಮನೆಗೆ ವರ್ಷದ ಯಾವುದೇ ಅವಧಿಯಲ್ಲಿ ಅತಿಥಿಗಳು ಬಂದರೂ ಮನೆಯಲ್ಲಿಯೇ ಯಂತ್ರದಿಂದ ಅರೆದ ಕಬ್ಬಿನ ಹಾಲು ಲಭ್ಯ.
ತಾಲೂಕಿನಲ್ಲಿ ಒಬ್ಬ ಮಾದರಿ ರೈತರಾಗಿ ಗುರುತಿಸಿಕೊಂಡಿರುವ ಕೃಷ್ಣ ಭಟ್ಟರಿಗೆ ಬಾಸಗೋಡದ ಕೃಷಿ ಹಬ್ಬದಲ್ಲಿ ಜಿಲ್ಲಾ ಮಟ್ಟದ ‘ಕೃಷಿ ಭೀಮ’ ಪ್ರಶಸ್ತಿ, ಕೃಷಿ ಇಲಾಖೆಯಿಂದ ‘ಪ್ರಗತಿಪರ ರೈತ’ ಪ್ರಶಸ್ತಿ ಮತ್ತಿತರ ಗೌರವಗಳು ಸಂದಿವೆ.
ಉಪವನ ಸೃಷ್ಟಿ: ಸಾಲಧೂಪ, ಮತ್ತಿ, ಭರಣಿಗೆ, ಹೊನಗಲು, ನೇರಳೆ, ಹೊಳೆದಾಸವಾಳ, ತಾರಿ ಮುಂತಾದ ಹತ್ತು ಸಾವಿರಕ್ಕೂ ಹೆಚ್ಚು ಗಿಡಗಳನ್ನು ಈವರೆಗೆ ನೆಟ್ಟು ಪೋಷಿಸಿದ್ದಾರೆ. ಪರಿಣಾಮವಾಗಿ ಇಂದು ಅವರ ಕೃಷಿಭೂಮಿಯ ಸುತ್ತಲೂ ವಿಶಾಲವಾದ ಸುಂದರ ಉಪವನ ಸೃಷ್ಟಿಯಾಗಿದೆ. ಇಂದು ಆ ಗಿಡಗಳು ಮರವಾಗಿ ಬೆಳೆದು ನಿಂತಿವೆ. ಇದರಿಂದ ಪರಿಸರಕ್ಕೂ ಒಳ್ಳೆಯದು ಜತೆಗೆ ತೋಟಕ್ಕೆ ಅಗತ್ಯವಿರುವ ತರಗೆಲೆ, ಸೊಪ್ಪು, ಕಟ್ಟಿಗೆ ಇತ್ಯಾದಿಗಳಿಗೂ ಕೊರತೆಯಿಲ್ಲ. ಇವರ ಕಾರ್ಯಕ್ಕೆ ಅರಣ್ಯ ಇಲಾಖೆಯೂ ತನ್ನಲ್ಲಿರುವ ಸಸಿಗಳನ್ನು ಕೊಟ್ಟು ಸಹಕರಿಸಿದೆ. ಅಪರೂಪದ ಜಾತಿಯ ಗಿಡಗಳನ್ನು ಹಣ ಕೊಟ್ಟು ತಂದಾದರೂ ನೆಟ್ಟು ಬೆಳೆದಿರುವುದು ಇವರ ಸಸ್ಯಪ್ರೇಮಕ್ಕೆ ಸಾಕ್ಷಿ.

ಹಳ್ಳಿಗಳಲ್ಲಿ ಕೃಷಿ ಭೂಮಿ ಹೊಂದಿಯೂ, ಕೈಚೀಲ ಹಿಡಿದು ಮನೆ ಬಳಕೆಗೆ ತರಕಾರಿ ತರಲು ಮಾರುಕಟ್ಟೆಗೆ ಹೋಗುವವರು ನನ್ನಪ್ರಕಾರ ರೈತ ಎನಿಸಿಕೊಳ್ಳಲು ಯೋಗ್ಯರಲ್ಲ. ಮನೆಗೆ ಬೇಕಾದ ತರಕಾರಿಗಳನ್ನು ನಾವೇ ಬೆಳೆದುಕೊಳ್ಳುವುದು ಕಷ್ಟವೇನಿಲ್ಲ. ಶುದ್ಧ ಸಾವಯವ ತರಕಾರಿಗಳನ್ನು ನಾವೇ ಬೆಳೆಸಿ, ಬಳಸಿದರೆ ಹಣದ ಉಳಿತಾಯ ಆಗುವುದಲ್ಲದೆ, ಆರೋಗ್ಯಕ್ಕೂ ಒಳ್ಳೆಯದು.ಕೃಷ್ಣ ಶಂಕರ ಭಟ್ಟ ಬ್ರಹ್ಮೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net