

ಕುಮಟಾ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವಂತೆ ಆಗ್ರಹಿಸಿ ಫೆ.5 ರಿಂದ ಕುಮಟಾದಿಂದ ಭಟ್ಕಳಕ್ಕೆ ಪಾದಯಾತ್ರೆ ನಡೆಸಲಾಗುವುದು ಎಂದು ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಜೀವ ಉಳಿಸುವ ದೃಷ್ಟಿಯಿಂದ ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯವಿದ್ದು ಅದನ್ನು ನಿರ್ಮಾಣ ಮಾಡಲು ತಕ್ಷಣ ಸರ್ಕಾರ ಹಣ ಮಂಜೂರು ಮಾಡಬೇಕು ಎಂದು ಹಲವು ದಿನಗಳಿಂದ ವಿವಿಧ ರೀತಿಯ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಈ ಹಿಂದೆ ಶಿರಸಿಯಿಂದ ಕಾರವಾರವರೆಗೆ ಪಾದಯಾತ್ರೆ ನಡೆಸಲಾಗಿದೆ. ಶಿರಸಿಯಲ್ಲಿ ಧರಣಿ ನಡೆಸಲಾಗಿದೆ. ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಧರಣಿ ನಡೆಸಲಾಗಿದೆ. ಅದರ ಫಲವಾಗಿ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಆಸ್ಪತ್ರೆಗಾಗಿ ಧ್ವನಿ ಎತ್ತಿದ್ದರು.
ಹೋರಾಟದ ಮುಂದುವರಿದ ಭಾಗವಾಗಿ ಫೆ. 5 ರಂದು ಕುಮಟಾದಲ್ಲಿ ಈ ಹಿಂದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿಗದಿಯಾಗಿದ್ದ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಿ, ಪಾದಯಾತ್ರೆ ಪ್ರಾರಂಭಿಸುತ್ತೇವೆ. ಮೂರು ದಿನದಲ್ಲಿ ಭಟ್ಕಳವನ್ನು ತಲುಪಿ, ಮಂಕಾಳ ವೈದ್ಯರಿಗೆ ಮನವಿ ನೀಡಲಿದ್ದೇವೆ ಎಂದರು.
ಆಸ್ಪತ್ರೆ ನಿರ್ಮಾಣ ಮಾಡಲು ಈ ಹಿಂದಿನ ಸರ್ಕಾರದ ಅವಽಯಲ್ಲಿ ಪಟ್ಟಣದಲ್ಲಿ ಗುರುತಿಸಲಾದ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಬರುವ ಬಜೆಟ್ ನಲ್ಲಿ ಹಣ ಮಂಜೂರು ಮಾಡಬೇಕು ಎಂಬುದು ನಮ್ಮ ಹಕ್ಕೊತ್ತಾಯವಾಗಿದೆ ಎಂದರು.
ಬೇಡದ ಯೋಜನೆಗಳಿಗೆ 100 ಕೋಟಿ, 200 ಕೋಟಿ ರೂ.ಗಳನ್ನು ಕೊಡುತ್ತಿದ್ದೀರಿ. ಜನರ ಜೀವ ಉಳಿಸುವ ಆಸ್ಪತ್ರೆ ನಿರ್ಮಾಣಕ್ಕೆ 300 ಕೋಟಿ ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ ಅನಂತಮೂರ್ತಿ ಹೆಗಡೆ ಆಸ್ಪತ್ರೆಯ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಸರ್ಕಾರ 15 ರಿಂದ 20 ಎಕರೆಯನ್ನು ಗುರುತಿಸಿ, ಕೈಗಾರಿಕಾ ವಲಯ ಸ್ಥಾಪಿಸಬೇಕು. ಮಹಿಳೆಯರಿಗೆ ಉದ್ಯೋಗ ನೀಡಲು ಗಾರ್ಮೆಂಟ್ ಫ್ಯಾಕ್ಟರಿಗಳನ್ನು ಸ್ಥಾಪಿಸಬೇಕು. ಹಿರೇಗುತ್ತಿಯಲ್ಲಿ ಸ್ವಾಧೀನವಾದ 1800 ಎಕರೆ ಜಾಗ ಪಾಳು ಬಿದ್ದಿದೆ. ಈ ಜಾಗದಲ್ಲಿಯೇ 500 ಎಕರೆಯನ್ನು ಸಾಫ್ಟ್ವೇರ್ ಪಾರ್ಕ್ ಎಂದು ಘೋಷಣೆ ಮಾಡಿ, 300 ಎಕರೆಯನ್ನು ಗಾರ್ಮೆಂಟ್ಸ್ ಹಬ್ಬ್ ಮಾಡಬೇಕು ಎಂದರು. ಬಿಜೆಪಿ ಪ್ರಮುಖ ಶಿವಾನಂದ ಹೆಗಡೆ ಕಡತೋಕ, ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸಂಸ್ಥಾಪಕ ಉಮೇಶ ಹರಿಕಾಂತ, ಟ್ರಸ್ಟಿ ಸಂತೋಷ ನಾಯ್ಕ, ಸಾಮಾಜಿಕ ಹೋರಾಟಗಾರ ಮಂಜುನಾಥ ಗುನಗಾ ಇತರರು ಇದ್ದರು.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸದನದಲ್ಲಿ ಬಿಸಿ ಚರ್ಚೆ