

ಹಾನಗಲ್ಲ: ಪಟ್ಟಣದ ಪ್ರತಿಷ್ಠಿತರ ಬಡಾವಣೆ ಎಂದೇ ಹೆಸರಾಗಿರುವ ಕುಮಾರೇಶ್ವರನಗರದ ನಿವಾಸಿಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಇಲ್ಲಿನ ನಿವಾಸಿಗಳು ಸಮಸ್ಯೆ ಹೋಗಲಾಡಿಸಲು ಹಲವು ವರ್ಷಗಳಿಂದ ಪುರಸಭೆಗೆ ಮನವಿ ಸಲ್ಲಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಮಳೆಗಾಲದಲ್ಲಿ ಕುಮಾರೇಶ್ವರನಗರದ ನಿವಾಸಿಗಳ ಬವಣೆ ಅಷ್ಟಿಷ್ಟಲ್ಲ. ಮನೆಗಳನ್ನು ಕೆರೆಯಲ್ಲಿ ಕಟ್ಟಲಾಗಿದೆಯೋ ಎಂಬ ಅನುಮಾನ ಮೂಡುತ್ತದೆ. ಬಡಾವಣೆಯ ಎಲ್ಲ ಮನೆಗಳಿಗೆ ನೀರು ನುಗ್ಗಿ ಮನೆಯಿಂದ ಹೊರಬರಲಾಗದ ಸ್ಥಿತಿ ಉಂಟಾಗುತ್ತಿದೆ. ಈ ಬಡಾವಣೆ ತಗ್ಗು ಪ್ರದೇಶದಲ್ಲಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದರೆ, ಇದಕ್ಕೆ ಶಾಶ್ವತ ಪರಿಹಾರ ಒದಗಿಸುವವರು ಯಾರು ಎಂಬ ಪ್ರಶ್ನೆ ದಶಕದಿಂದ ಸ್ಥಳೀಯ ನಿವಾಸಿಗಳನ್ನು ಕಾಡುತ್ತಿದೆ.
ಮಳೆಯ ನೀರಿನ ಸಮಸ್ಯೆ: ಮಳೆಗಾಲ ಆರಂಭವಾದರೆ ಪಟ್ಟಣದ ನವನಗರ, ದರ್ಗಾ, ಚಿದಂಬರನಗರ ಸೇರಿ ಹಲವು ಬಡಾವಣೆಗಳ ಅಪಾರ ಪ್ರಮಾಣದ ನೀರು ಹರಿದುಬಂದು ಕುಮಾರೇಶ್ವರನಗರದಲ್ಲಿ ನಿಲ್ಲುತ್ತದೆ. ದರ್ಗಾದಿಂದ ಹರಿದು ಬರುವ ನೀರು ಕುಮಾರೇಶ್ವರ ನಗರದ ಸರ್ಕಾರಿ ಪಿಯು ಕಾಲೇಜ್ ಪಕ್ಕದ ಕುಂಬಾರಕಟ್ಟಿಗೆ ಸೇರಿ, ನಂತರ ಮುಂದಿನ ಅಚಗೇರಿ ಕೆರೆಗೆ ಸಾಗುತ್ತಿತ್ತು. ಆದರೆ, ಈ ಕೆರೆ ಮಣ್ಣು ತುಂಬಿ ಸಮತಟ್ಟಾಗಿದ್ದರಿಂದ ನೀರು ಬಡಾವಣೆಯಲ್ಲಿ ನಿಂತುಕೊಳ್ಳುವಂತಾಗಿದೆ. ಈ ನೀರು ಮುಂದೆ ಸಾಗುವಲ್ಲಿ ಮನೆಗಳು ನಿರ್ವಣವಾದ್ದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ಪುರಸಭೆ ಸಾಕಷ್ಟು ಬಾರಿ ಪರಿಶೀಲನೆ ಕೈಗೊಂಡಿದ್ದರೂ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಇಂಥ ಘಟನೆ ಇದೇ ಮೊದಲಲ್ಲ. ಪ್ರತಿ ವರ್ಷದ ಮಳೆಗಾಲದಲ್ಲೂ ಬಡಾವಣೆಯ ಎಲ್ಲ ಮನೆಯಂಗಳಕ್ಕೂ ನೀರು ತುಂಬಿ ಜನಜೀವನ ಅಸ್ತವ್ಯಸ್ತಗೊಳಿಸುತ್ತದೆ. ಎಲ್ಲರ ಮನೆಯ ಕಾಂಪೌಂಡ್ ಒಳಗೆಲ್ಲ ನೀರು ತುಂಬಿ ವಾಹನ ಸಂಚಾರಕ್ಕೂ ಸಂಚಕಾರ ತಂದಿಡುತ್ತಿದೆ. ಆದರೂ ಈ ಸಮಸ್ಯೆಗೆ ಮುಕ್ತಿ ಸಿಗದಿರುವುದು ಇಲ್ಲಿನ ನಿವಾಸಿಗಳ ಬೇಸರಕ್ಕೆ ಕಾರಣವಾಗಿದೆ.
ಸಮಸ್ಯೆ ಪರಿಹಾರ ಯಾರ ಜವಾಬ್ದಾರಿ: ಪ್ರತಿ ವರ್ಷವೂ ಮಳೆಗಾಲದ ಸಮಯದಲ್ಲಿ ಈ ಬಡಾವಣೆಯ ನಿವಾಸಿಗಳು ಜಲದಿಗ್ಬಂಧನ ಎದುರಿಸುವುದು ಅನಿವಾರ್ಯ. ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಪುರಪಿತೃಗಳು, ಜನಪ್ರತಿನಿಧಿಗಳು ಸ್ಥಳ ಪರಿಶೀಲಿಸುತ್ತಾರೆ, ನೀರು ಸಾಗಿಸುವ ಪರಿಹಾರದ ಚರ್ಚೆಗಳನ್ನು ನಡೆಸಿ ತೆರಳುತ್ತಾರೆ. ಇಷ್ಟು ವರ್ಷಗಳಾದರೂ ಯಾವುದೇ ಮಾಗೋಪಾಯಗಳನ್ನು ಕೈಗೊಂಡಿಲ್ಲ ಎಂದು ಇಲ್ಲಿನವರು ಆರೋಪಿಸುತ್ತಾರೆ. ಮೇಲಿನ ಬಡಾವಣೆಗಳ ನೀರು ಮುಂದಿನ ಕೆರೆಗೆ ಸಾಗಿಸಲು ರಾಜಕಾಲುವೆ ನಿರ್ವಿುಸಬೇಕಿದೆ. ಬಡಾವಣೆಯಲ್ಲಿ ಕಿರುಕಾಲುವೆಗಳನ್ನು ನಿರ್ವಿುಸಿರುವುದರಿಂದ ಅಪಾರ ಪ್ರಮಾಣದಲ್ಲಿ ಬರುವ ನೀರು ಹರಿದು ಹೋಗದೇ ಎಲ್ಲರ ಮನೆಯಂಗಳಕ್ಕೂ ಹರಡಿಕೊಳ್ಳುತ್ತದೆ. ಮಳೆ ನಿಂತು ಒಂದೆರಡು ದಿನಗಳ ನಂತರ ನೀರು ಇಳಿಮುಖವಾಗುತ್ತದೆ. ಅಲ್ಲಿಯವರೆಗೂ ಸಾರ್ವಜನಿಕರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವುದು ತಪ್ಪುತ್ತಿಲ್ಲ. ರಸ್ತೆಗೆ ಅಡ್ಡಲಾಗಿ ನಿರ್ವಿುಸಲಾಗಿರುವ ಸಿ.ಡಿ. (ಅಡ್ಡ ಚರಂಡಿ)ಗಳು, ಕಾಲುವೆಗಳು ಅವೈಜ್ಞಾನಿಕವಾಗಿರುವುದರಿಂದ ನೀರು ಹರಿಯುತ್ತಿಲ್ಲ ಎನ್ನುವುದು ಸಾರ್ವಜನಿಕರ ವಾದವಾಗಿದೆ.
ವಿವಿಧ ಬಡಾವಣೆಗಳಿಂದ ಕುಂಬಾರಕಟ್ಟಿಗೆ ಬರುವ ನೀರನ್ನು ಕುಮಾರೇಶ್ವರನಗರದ ಸರ್ಕಾರಿ ಪಿಯು ಕಾಲೇಜ್ನಿಂದ ನ್ಯಾಯಾಲಯದ ರಸ್ತೆವರೆಗೆ ಗಟಾರ ನಿರ್ವಿುಸಲು ನಗರೋತ್ಥಾನ ಯೋಜನೆಯಡಿ ಕಾಮಗಾರಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅದು ಟೆಂಡರ್ ಹಂತದಲ್ಲಿದೆ. ಜಿಲ್ಲಾಧಿಕಾರಿಗಳ ಅನುಮೋದನೆ ನಂತರ ಕಾಮಗಾರಿ ಆರಂಭಗೊಳಿಸಲಾಗುವುದು. | ನಾಗರಾಜ ಮಿರ್ಜಿ ಪುರಸಭೆ ಇಂಜಿನಿಯರ್
ಕುಮಾರೇಶ್ವರನಗರದಲ್ಲಿ ಮಳೆಗಾಲ ಕಳೆಯುವುದು ದುಸ್ತರವಾಗುತ್ತಿದೆ. ಇಲ್ಲಿ ಬೃಹತ್ ಕಟ್ಟಡಗಳಿದ್ದರೂ ರಸ್ತೆ ಮತ್ತು ಮನೆಯ ಎದುರುಗಡೆ ನೀರು ತುಂಬಿಕೊಳ್ಳುವುದರಿಂದ ಹೊರಬರುವುದು ಸಾಧ್ಯವಾಗುತ್ತಿಲ್ಲ. ಮೇಲಿನ ಎಲ್ಲ ಬಡಾವಣೆಗಳ ನೀರನ್ನು ಬೇರೆ ಮಾರ್ಗದಲ್ಲಿ ತೆರಳುವಂತೆ ಗಟಾರಗಳನ್ನು ನಿರ್ವಿುಸಿದರೆ ಒಂದಷ್ಟು ಸಮಸ್ಯೆ ಬಗೆಹರಿಯುತ್ತದೆ. ಹಲವು ವರ್ಷಗಳಿಂದ ಮನವಿ ಮಾಡಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಇಚ್ಛಾಶಕ್ತಿ ತೋರಬೇಕಿದೆ. | ಕೆ.ಜಿ. ಪಾಟೀಲ ಸ್ಥಳಿಯ ನಿವಾಸಿ