ಕುಮಾರವ್ಯಾಸ ಜಾನಪದ ಕವಿ

mysore
Published on

ಮೈಸೂರು; ಕನ್ನಡದ ಉತ್ಕೃಷ್ಟ ಕೃತಿಯಾದ ಮಹಾಭಾರತ ಜಾನಪದ ಸಾಹಿತ್ಯವಾಗಿದ್ದು, ಇದನ್ನು ರಚನೆ ಮಾಡಿದ ಕುಮಾರವ್ಯಾಸ ಕೂಡ ಜಾನಪದ ಕವಿ ಎಂದು ಸಾಹಿತಿ ಪ್ರೊ. ಕೃಷ್ಣಮೂರ್ತಿ ಹನೂರು ಬಣ್ಣಿಸಿದರು.


ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ಯುಎಸ್‌ಎ ಹಾರ್ವರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿರುವ ಪ್ರೊ.ಸಿ.ಎನ್.ರಾಮಚಂದ್ರನ್, ಪ್ರೊ.ನಾರಾಯಣ ಹೆಗ್ಗಡೆ ಅನುವಾದಿಸಿರುವ ‘ಕುಮಾರವ್ಯಾಸ- ಕನ್ನಡ ಮಹಾಭಾರತ’ ಇಂಗ್ಲಿಷ್ ಅನುವಾದಿತ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕುಮಾರವ್ಯಾಸ ಮಹಾಭಾರತವನ್ನು ಅನೇಕ ವಿದ್ವಾಂಸರು ಸಂಪಾದಿಸಿದ್ದಾರೆ. ಈ ಮಹಾಕೃತಿಯ ಜನಪ್ರಿಯತೆಯೇ ಇದಕ್ಕೆ ಕಾರಣ. ಈಗಲೂ ಇದನ್ನು ಜನರು ಓದುತ್ತಿದ್ದಾರೆ. ಇದರಿಂದಾಗಿ ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ. ದಕ್ಷಿಣ, ಉತ್ತರ, ಮಧ್ಯ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಭಾಗದಲ್ಲೂ ಇದು ಜನಪ್ರಿಯತೆ ಗಳಿಸಿದೆ. ಆದ್ದರಿಂದ ಕುಮಾರವ್ಯಾಸ ಜನಪ್ರಿಯ ಕವಿ ಎಂದು ಹೇಳಿದರು.


ಕುಮಾರವ್ಯಾಸ ರಚಿತ ಮಹಾಭಾರತವನ್ನು ರಾಷ್ಟ್ರಕವಿ ಕುವೆಂಪು ಪಠ್ಯಕ್ರಮಕ್ಕೆ ಸಿದ್ಧಪಡಿಸಿದ್ದರು. ಇದು ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೆಚ್ಚು ಅನುಕೂಲಕರವಾಗಿದೆ. ಕುವೆಂಪು ಅವರು ಮೂರು ದೊಡ್ಡ ಸಾಹಿತ್ಯ ಕೃಷಿ ಮಾಡಿದ್ದಾರೆ. ಅವುಗಳೆಂದರೆ, ರಾಮಾಯಣದ ಮರು ರಚನೆಯಾದ ಶ್ರೀರಾಮಾಯಣದರ್ಶನಂ, ಕುಮಾರವ್ಯಾಸ ಮಹಾಭಾರತ ಸಂಪಾದನೆ, ಮಲೆಗಳಲ್ಲಿ ಮದುಮಗಳು ಕಾದಂಬರಿ. ಈ ಪೈಕಿ 1954ರಲ್ಲೇ ಮಾಸ್ತಿ ಅವರೊಂದಿಗೆ ಕುಮಾರವ್ಯಾಸ ಮಹಾಭಾರತವನ್ನು ಸಂಪಾದಿಸಿ ಪ್ರಕಟಿಸಿ ಗಮನ ಸೆಳೆದಿದ್ದರು ಎಂದರು.


ಕುವೆಂಪು, ಮಾಸ್ತಿ ಬಳಿಕ ಅನೇಕ ವಿದ್ವಾಂಸರು ಕುಮಾರವ್ಯಾಸ ಮಹಾಭಾರತವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಇತ್ತೀಚೆಗೆ ಡಾ.ಸಿಪಿಕೆ ಅವರೂ ಸಂಪಾದಿಸಿದ್ದಾರೆ. ಜಾನಪದ ಕವಿಯಾದ ಕುಮಾರವ್ಯಾಸ ಜನರಿಗೆ ಅರ್ಥವಾಗುವ ರೀತಿಯಲ್ಲಿ ಕೃತಿ ರಚಿಸಿದ್ದಾರೆ. ಹೀಗಾಗಿ, ಕುವೆಂಪು ಮತ್ತು ಮಾಸ್ತಿ ಅವರು ಸಂಪಾದಿಸಿದ ಕೃತಿಯನ್ನು ಈಗ ಇಂಗ್ಲಿಷ್‌ಗೆ ಅನುವಾದಿಸಿ ಮೊದಲ ಸಂಪುಟ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.


ಕುಮಾರವ್ಯಾಸ ಕೃತಿಯಲ್ಲಿ 10 ಪರ್ವಗಳಿವೆ. ಈ ಪೈಕಿ ಆದಿಪರ್ವ, ಸಭಾಪರ್ವ, ಅರಣ್ಯಪರ್ವ ಅಧ್ಯಾಯಗಳನ್ನು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಲಾಗಿದೆ. ಉದ್ಯೋಗಪರ್ವ, ವಿರಾಟಪರ್ವ, ಕರ್ಣಪರ್ವ ಇನ್ನಿತರ ಪರ್ವಗಳ ಅನುವಾದದ ಕೆಲಸ ಆಗಬೇಕಿದೆ ಎಂದರು.


ಕೃತಿ ಬಿಡುಗಡೆಗೊಳಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಕುಮಾರವ್ಯಾಸ ಮಹಾಭಾರತವು ಕನ್ನಡದ ಮೇರುಕೃತಿ. ಹಾರ್ವರ್ಡ್ ವಿವಿಯು ಭಾರತದ ವಿವಿಧ ಭಾಷೆಗಳಲ್ಲಿ 100 ಕೃತಿಗಳನ್ನು ಪ್ರಕಟಿಸಲು 5.2 ಮಿಲಿಯನ್ ಡಾಲರ್ ಹಣವನ್ನು ವಿನಿಯೋಗಿಸುತ್ತಿದೆ. ಅದರ ಭಾಗವಾಗಿಯೇ ಕುಮಾರವ್ಯಾಸ ಮಹಾಭಾರತ ಕೃತಿಯನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಲಾಗಿದೆ ಎಂದು ತಿಳಿಸಿದರು.


ಸ್ಟೋನಿಬ್ರೂಕ್ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‌ನ ಭಾಷಾಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್.ಎನ್.ಶ್ರೀಧರ್, ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಎಚ್.ಎಸ್. ಶಿವಪ್ರಕಾಶ್, ಮೈಸೂರು ವಿವಿ ಇಂಗ್ಲಿಷ್ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಕೆ. ಸದಾಶಿವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net