ಕುಮಾರಸ್ವಾಮಿ ಹೇಳಿಕೆಗೆ ಉತ್ತರ ಕೊಡಬಾರದು

06 CRP-2A
Published on


ಚನ್ನರಾಯಪಟ್ಟಣ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಉತ್ತರ ಕೊಡಬಾರದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ಕೇಂದ್ರದಲ್ಲಿ ಸಚಿವರಾದವರಿಗೆ ಒಂದು ಸೆಕೆಂಡ್ ಸಮಯವಿಲ್ಲದಂತೆ ಮಾಡುವಷ್ಟು ಕೆಲಸ ಇರುತ್ತದೆ. ಆದರೆ ಎಚ್.ಡಿ.ಕುಮಾರಸ್ವಾಮಿ ಅವರು, ವಾರಕ್ಕೆರಡು ದಿನ ಇಲ್ಲಿಗೆ ಬಂದು ಅವರಿವರನ್ನು ಬೈಯುವುದನ್ನೇ ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ಇಲ್ಲಸಲ್ಲದ ಹೇಳಿಕೆ ನೀಡುವ ಕುಮಾರಸ್ವಾಮಿ ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ಇಂದು ಮಧ್ಯಾಹ್ನದಿಂದ ತೀರ್ಮಾನ ಮಾಡಿದ್ದೇನೆ ಎಂದು ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲೇವಡಿ ಮಾಡಿದರು.

ದಿನ ಬೆಳಗಾದರೆ ಕುಮಾರಸ್ವಾಮಿ ಇಲ್ಲದ ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯ ಅವರು ಪ್ರಬುದ್ಧ ರಾಜಕಾರಣಿ. ಅವರನ್ನು ಪದೇ ಪದೇ ದೂರುವುದು ಎಷ್ಟು ಸರಿ ? ನಾನು ಅವರಂತೆಯೇ ಆಗುವುದು ಬೇಡ. ಜನ ಏನಂತಾರೆ ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳು ಕಳೆದಿದೆ. ಯಾವುದೇ ವಿಚಾರದಲ್ಲಿ ರೈತರಿಗೆ ಬೆನ್ನು ತೋರಿಸದೇ ಕೆಲಸ ಮಾಡಿದ್ದೇವೆ. ಕುಮಾರಸ್ವಾಮಿ 14 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದನ್ನು ನೋಡಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದ ಶಿಫಾರಸನ್ನು ತಡಮಾಡದೇ ಜಾರಿಗೆ ತಂದ್ದಿದ್ದೇವೆ. ಕ್ಯಾಬಿನೆಟ್‌ನಲ್ಲಿ ಒಂದು ತಿಂಗಳು ವಿಳಂಬ ಮಾಡಲು ಒತ್ತಾಯವಿದ್ದರೂ, ಮುಖ್ಯಮಂತ್ರಿ ದೃಢವಾಗಿ ಸರ್ಕಾರಿ ನೌಕರರ ಪರ ನಿಂತರು. ನುಡಿದಂತೆ ನಡೆದು 5 ಗ್ಯಾರಂಟಿ ಜಾರಿಗೆ ತಂದಿದ್ದೇವೆ ಎಂದರು.

ಜಾತಿಗಣತಿ ಎಲ್ಲ ರಾಜ್ಯದಲ್ಲೂ ನಡೆಯುತ್ತಿದ್ದು, ಉಪಸಮಿತಿ ರಚನೆ ಬಳಿಕ ಚರ್ಚಿಸಿ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ಇದರಿಂದ ಯಾವುದೇ ಸಮುದಾಯದ ಜನರಿಗೆ ಅನ್ಯಾಯ ಆಗುವುದಿಲ್ಲ. ಜಾತಿಗಣತಿಯಿಂದ ಆಗಬಾರದ್ದೇನೂ ಆಗುವುದಿಲ್ಲ. ನನಗೆ ತಿಳಿದಿರುವ ಮಾಹಿತಿಯಂತೆ ಒಕ್ಕಲಿಗರಿಗೆ, ಲಿಂಗಾಯಿತರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಈಗ ಮುಖ್ಯಮಂತ್ರಿಗಳ ಕೈಯಲ್ಲಿ ವರದಿ ಇದೆ. ಉಪ ಸಮಿತಿಯ ಮೂಲಕ ಚರ್ಚೆ ನಡೆದು ಅಂತಿಮವಾಗಿ ಸಂಪುಟ ಸಭೆಯಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

ಸಂಸದ ಶ್ರೇಯಸ್ ಪಟೇಲ್, ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಸಿ.ಆರ್.ಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net