

ಮೈಸೂರು:ಕುವೆಂಪು ವಿಚಾರಧಾರೆಯನ್ನು ಮನ-ಮನಸ್ಸಿನೊಳಗೆ ತೆಗೆದುಕೊಳ್ಳಬೇಕು. ಇಲ್ಲವಾದರೆ, ಸ್ವಾತಂತ್ರೃಹೀನರಾಗಿ ಪಶುಗಳಂತೆ ಬದುಕಬೇಕಾಗುತ್ತದೆ ಎಂದು ಸಾಹಿತಿ ಎಲ್.ಎನ್.ಮುಕುಂದರಾಜ್ ಎಚ್ಚರಿಸಿದರು.
ಜಾಗೃತ ಕರ್ನಾಟಕ ವೇದಿಕೆ ವತಿಯಿಂದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಕುವೆಂಪು ಕ್ರಾಂತಿ ಕಹಳೆ-50’ ಕಾರ್ಯಕ್ರಮದಲ್ಲಿ ಮಾತನಾಡಿದರು
ಈಗ ರಕ್ತಕ್ರಾಂತಿ ಬೇಕಿಲ್ಲ. ವಿಚಾರ ಕ್ರಾಂತಿ ಆಗಬೇಕು. ರಕ್ತಕ್ರಾಂತಿ ಬಲಿಪೀಠವನ್ನು ಬಿಟ್ಟು ಸಾಂಸ್ಕೃತಿಕ ಕ್ರಾಂತಿಗೆ ಮುನ್ನುಡಿ ಬರೆಯಬೇಕಾಗಿದೆ ಎಂದರು.
ಕೇಸರಿ ಧ್ವ್ವಜ ಹಾರಾಟ ಪ್ರಕರಣದಿಂದ ಮಂಡ್ಯ ಜಿಲ್ಲೆಯ ಜನರು ತಲೆತಗ್ಗಿಸುವಂತಾಗಿದೆ. ಹೀಗೆ ಗಲಾಟೆ ಮಾಡಿ ಜೈಲಿಗೆ ಹೋಗಬೇಕಾಗುತ್ತದೆ. ಇದು ಯುವಕರಿಗೆ ಏಕೆ ಅರ್ಥವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ರಾಜಕೀಯ ಕಾರಣಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಕಾದರೆ ಬಿಜೆಪಿಯೊಂದಿಗೆ ಹೋಗಲಿ. ಆದರೆ ಜೆಡಿಎಸ್ ಕಾರ್ಯಕರ್ತರನ್ನೂ ಏಕೆ ಕರೆದುಕೊಂಡು ಹೋಗುತ್ತಿದ್ದಾರೆ? ಒಮ್ಮೆ ಹೋದವರು ವಾಪಸ್ ಮರಳಿ ಬರುವುದಿಲ್ಲ.
ಇನ್ನು ಐದಾರು ವರ್ಷದಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ ಮೈತ್ರಿಯಿಂದ ಹೊರಬಹುದು. ಆದರೆ ಅಲ್ಲಿಗೆ ಹೋದ ಜೆಡಿಎಸ್ ಕಾರ್ಯಕರ್ತರು ಹಾಗೇ ಮಾಡುವುದಿಲ್ಲ. ಈ ಹಿಂದೆ ಎಸ್.ಬಂಗಾರಪ್ಪ ಅವರಿಗೆ ಆದ ಪರಿಸ್ಥಿತಿಯೇ ಇವರಿಗೂ ಆಗಲಿದೆ ಎಂದು ಎಚ್ಚರಿಸಿದರು.
ಧರ್ಮ-ದೇವರು ಎಂಬುದು ನಶೆ. ಇದು ಒಮ್ಮೆ ಹೇರಿದರೆ ಇಳಿಯುವುದು ಕಷ್ಟ. ಇದು ತಲೆಗೇರಿದರೆ ಬದುಕು ಇನ್ನಷ್ಟು ಹೀನಸ್ಥಿತಿ ತಲುಪುತ್ತದೆ. ಬುದ್ಧಿಜೀವಿಗಳು, ಸಾಹಿತಿಗಳನ್ನು ಗಂಜಿಗಿರಾಕಿಗಳು, ಲದ್ದಿಜೀವಿಗಳು ಎಂದು ಲಘುವಾಗಿ ಮಾತನಾಡಿ ಸಾರ್ವಜನಿಕವಾಗಿ ಅವಮಾನ ಮಾಡಿ ಸತ್ಯದ ಕತ್ತು ಹಿಸುಕುವ ಕೆಲಸ ಮಾಡಲಾಗುತ್ತಿದೆ ಎಂದು ಇದೇ ವೇಳೆ ಕಿಡಿಕಾರಿದರು.
ಮುಂದಿನ ದಿನಗಳಲ್ಲಿ ಸಂವಿಧಾನ ಇರುವುದಿಲ್ಲ. ಇದನ್ನು ನಾವು ಹೇಳುತ್ತಿಲ್ಲ. ಬಿಜೆಪಿಯ ಕೆಲವರು ಹೇಳುತ್ತಿದ್ದಾರೆ. ಆದ್ದರಿಂದ ಬಿಜೆಪಿ ನಡೆಯ ಕುರಿತು ಎಚ್ಚರಿಕೆ ವಹಿಸಬೇಕು ಎಂದರು.
‘ದೇಶವೇ ದೇವರು’ ಎಂದು ಕುವೆಂಪು ಹೇಳಿರುವುದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕು. ಇದು ಎಲ್ಲ ಧರ್ಮದವರಿಗೆ ಅನ್ವಯವಾಗಲಿದೆ. ಗಾಳಿ, ನೀರು, ಭೂತಾಯಿಯೇ ದೇವರು. ದೇಶವೆಂದರೆ ಭೂಪಟವಲ್ಲ. ಅಲ್ಲಿರುವ ಜನರು. ಆದ್ದರಿಂದ ಪ್ರತಿಕ್ಷಣ ನಾವುಗಳು ಇದನ್ನೇ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಕೆ.ವಿ.ನಾರಾಯಣ, ರೈತ ಮುಖಂಡರಾದ ಪ್ರಸನ್ನಗೌಡ, ಅಹಿಂದ ಜವರಪ್ಪ, ಚಿಂತಕ ಬಸವರಾಜು, ಯುವ ಚಿಂತಕರಾದ ಡಾ.ಕಾವೇರಿ, ಕಾವ್ಯಶ್ರೀ, ಬಾಲಾಜಿ ಕುಂಬಾರ್, ಡಾ.ಕೆ.ಎಚ್.ಮುಸ್ತಾಫಾ, ಸಿ.ಮಹೇಶ್, ಧನಲಕ್ಷ್ಮೀ ಇತರರು ಇದ್ದರು
ಕುವೆಂಪು ವಿಚಾರವನ್ನು ಸಮಾಜದ ಜನರಿಗೆ ತಲುಪಿಸಬೇಕಿದೆ. ಆ ನಿಟ್ಟಿನಲ್ಲಿ ಕೆಲಸಗಳು ನಡೆಯಬೇಕು ಎಂದು ನಟ ‘ಡಾಲಿ’ ಧನಂಜಯ್ ಹೇಳಿದರು.
ಕುವೆಂಪು ಅವರ ಆಯ್ದ ಭಾಷಣಗಳನ್ನು ಓದಿದ ಅವರು, ಕಳೆದ ವರ್ಷ ದಸರಾದಲ್ಲಿ ‘ಯುವ ಜನರು ನಿರಂಕುಶಮತಿಗಳಾಗಬೇಕು’ ಎಂದು ಹೇಳಿದ್ದೆ. ಆದರೆ ಇದು ಬಹಳಷ್ಟು ವಿದ್ಯಾರ್ಥಿಗಳಿಗೆ ಅರ್ಥವೇ ಆಗಿರಲಿಲ್ಲ. ಕುವೆಂಪು ಕಾಲದ ವಿದ್ಯಾರ್ಥಿಗಳಿಗೂ ಈಗಿನ ಕಾಲದ ವಿದ್ಯಾರ್ಥಿಗಳು ಬಹಳಷ್ಟು ವ್ಯತ್ಯಾಸವಿದೆ. ಅವರ ವಿಚಾರವನ್ನು ಇವರಿಗೆ ಹೇಗೆ ತಲುಪಿಸಬೇಕು, ಹೇಗೆ ಅರ್ಥ ಮಾಡಿಸಿಕೊಡಬೇಕು? ಈ ಹಿನ್ನೆಲೆಯಲ್ಲಿ ಪ್ರಯತ್ನಗಳು ನಡೆಯಬೇಕಿದೆ ಎಂದರು.