ಏ.4ರಂದು ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

30 krp 01
ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ್ದ ಜೆಡಿಎಸ್, ಬಿಜೆಪಿ ಸ್ನೇಹಸಮ್ಮಿಲನ ಸಭೆಯನ್ನು ನಿಖಿಲ್ ಕುಮಾರಸ್ವಾಮಿ, ನಾರಾಯಣಗೌಡ ಸೇರಿದಂತೆ ಹಲವರು ಉದ್ಘಾಟಿಸಿದರು.
Published on

ಕೆ.ಆರ್.ಪೇಟೆ: ದೇಶ ಹಿತಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಸಭೆಯಲ್ಲಿ ಮಾತನಾಡಿದ ಅವರು, ರೈತ ಪರ ಕುಮಾರಣ್ಣನಿಗೆ ಚುನಾವಣೆಯಲ್ಲಿ ಅತಿಹೆಚ್ಚು ಮತ ನೀಡಬೇಕು. ಮಾಜಿ ಸಚಿವ ನಾರಾಯಣಗೌಡ ಕೂಡ ಕುಮಾರಣ್ಣ ಗೆಲುವಿಗೆ ಟೊಂಕಕಟ್ಟಿ ನಿಂತಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ. ಕಾವೇರಿ ಉಳಿವಿಗಾಗಿ ಹಾಗೂ ಕೇಂದ್ರದ ನಾಯಕರ ಒತ್ತಡದಿಂದಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡಬೇಕಾಯಿತು. ಕುಮಾರಣ್ಣ ಚುನಾವಣೆಗೆ ನಿಂತರೆ ಚಿತ್ರದುರ್ಗದ ವರೆವಿಗೂ ಬರುವ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಅನುಕೂಲವಾಗಲಿದೆ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ. ಏ.4ರಂದು ಕುಮಾರಣ್ಣ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.

ಸಂಸದ ಪ್ರತಾಪಸಿಂಹ ಮಾತನಾಡಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಕಾವೇರಿ ವಿಷಯವಾಗಿ ದೇವೇಗೌಡರ ಹೋರಾಟ ಅಪಾರವಾಗಿದೆ. 2018ರಲ್ಲಿ ಕೊಡಗಿನಲ್ಲಿ ಪ್ರವಾಹ ಬಂದಾಗ ಕುಮಾರಣ್ಣ ಜನರಿಗೆ ಸಾಕಷ್ಟು ಮನೆಗಳಲ್ಲಿ ಕಟ್ಟಿಸಿಕೊಟ್ಟಿದ್ದಾರೆ ಎಂದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ತಾಲೂಕಿನಲ್ಲಿ ಅತೀ ಹೆಚ್ಚು ಮತಗಳನ್ನು ನೀಡುವ ಮೂಲಕ ಕುಮಾರಣ್ಣ ಅವರನ್ನು ಕೇಂದ್ರ ಮಂತ್ರಿಯನ್ನಾಗಿಸಬೇಕು. ಅದಕ್ಕಾಗಿ ಎರಡು ಪಕ್ಷಗಳ ಮುಖಂಡರು ಶ್ರಮಿಸಬೇಕು. ನನಗೆ ಜೆಡಿಎಸ್‌ನಲ್ಲಿ ಇದ್ದಾಗ ಮಂಜಣ್ಣ ಬಲಗೈನಂತೆ ಇದ್ದರು. ನನ್ನ ಎರಡು ಚುನಾವಣೆಗಳಲ್ಲಿ ನನ್ನ ಗೆಲುವಿಗೆ ಶ್ರಮಿಸಿದವರು. ಮಂಜಣ್ಣ ಗೆದ್ದಿರುವುದು ನನಗೆ ಸಂತೋಷವಾಗಿದೆ ಂದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಕಾಂಗ್ರೆಸ್ ನಾಯಕರು ಜೆಡಿಎಸ್ ಬಗ್ಗೆ ಎಚ್ಚರದಿಂದ ಮಾತನಾಡಬೇಕು. ಕಾಂಗ್ರೆಸ್ ಮತದಾರರನ್ನು ಬ್ಲಾೃಕ್‌ಮೇಲ್ ಮಾಡುತ್ತಿದ್ದು, ತಕ್ಕ ಪಾಠ ಕಲಿಸಲಿದ್ದಾರೆ. ಬಜೆಟ್‌ನಲ್ಲಿ ಹಣ ನೀಡಿದಾಗ ಮಂಡ್ಯ ಬಜೆಟ್ ಎಂದು ಹಾಸ್ಯ ಮಾಡಿದ ನಿಮಗೆ ಕುಮಾರಣ್ಣ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿದರು. ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಮನ್ಮುಲ್ ನಿರ್ದೇಶಕ ಡಾಲುರವಿ, ಮನ್ಮುಲ್ ಮಾಜಿ ಅಧ್ಯಕ್ಷಎಂ.ಬಿ.ಹರೀಶ್, ಮೂಡ ಅಧ್ಯಕ್ಷ ಕೆ.ಶ್ರೀನಿವಾಸ್, ಎ.ಆರ್.ರಘು, ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net