

ಮೈಸೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆಗೆ ಸದನದ ಒಳಗೆ ಬಿಜೆಪಿಗೆ ಬೆಂಬಲ ನೀಡಿ, ಸದನದ ಹೊರಗೆ ಪ್ರತಿಭಟನೆ ಮಾಡುವ ನಾಟಕ ಆಡಿದ್ದ ಕುಮಾರಸ್ವಾಮಿ ಅವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ.
ಉತ್ತಮ ಸಾರ್ವಜನಿಕ ಬದುಕಿನ ಭಾಗವಾಗಿ ಈ ಹಿಂದೆಯೇ ಸೈದ್ಧಾಂತಿಕ ಬದ್ಧತೆಯ ಪ್ರಾಮುಖ್ಯತೆ ಮತ್ತು ಅದು ನಾಯಕತ್ವದ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆ ಒಳ್ಳೆಯ ಮನಸ್ಸಿನಿಂದ ಹಿಂದೆಯೇ ಅವರಿಗೆ ನಾನು ಎಚ್ಚರಿಸಿದ್ದೆ. ಆದರೆ ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದ ಅವರು ಈಗ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿ ಸೈದ್ಧಾಂತಿಕವಾಗಿ ತಾವೆಷ್ಟು ಅಧಃಪತನಕ್ಕೆ ಜಾರಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿರುಗೇಟು ಕೊಟ್ಟಿದ್ದಾರೆ.
ಒಂದು ಉತ್ತಮ ಪ್ರಾದೇಶಿಕ ಪಕ್ಷವಾಗಿ ಸಂಘಟನೆ ಮತ್ತು ವಿಷಯಾಧಾರಿತ ಹೋರಾಟಗಳ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ತೋರಬೇಕಿದ್ದ ಅವರು ಈಗಲೂ ಅಧಿಕಾರ ಎಂದರೆ ಅತಂತ್ರ ಸ್ಥಿತಿಯಲ್ಲಿ ದೊರಕುವ ಅನಾಯಾಸ ಅವಕಾಶ ಎಂದುಕೊಂಡಿದ್ದು ನಗೆಪಾಟಲಿನ ವಿಷಯವಾಗಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯ ಎಲ್ಲ ಜನ ವಿರೋಧಿ ನೀತಿಗಳ ಸಂದರ್ಭದಲ್ಲಿ ಮೌನವಾಗಿದ್ದು, ಕೆಲವಕ್ಕೆ ಬೆಂಬಲವನ್ನೂ ನೀಡಿದ ಕುಮಾರಸ್ವಾಮಿ ಅವರು ಅಧಿಕಾರ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕೆ ಬಹಳಷ್ಟು ಹತಾಶೆಯಿಂದ ವರ್ತಿಸುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ ಎಂದು ಜರಿದಿದ್ದಾರೆ.
ಮನೆಗೆ ಕರೆಂಟ್ ಪಡೆದುಕೊಂಡ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡಬಾರದು ಎಂದು ಬೋಧಿಸುವ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಒಂದೆರಡು ಗಂಟೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಹೋದರೆ, ರಾಜ್ಯದ ಸಮಸ್ಯೆಗಿಂತ ಕ್ರಿಕೆಟ್ ನೋಡುವುದು ಮುಖ್ಯ ಎಂದು ಅತ್ಯಂತ ಬಾಲಿಶ ಹೇಳಿಕೆ ನೀಡಿದ್ದರು.
ಅವರು ಮಾತ್ರ ಏನಾದರೂ ಹೇಳಬಹುದು, ಮಿಕ್ಕವರೆಲ್ಲರೂ ಅವರು ಅಪೇಕ್ಷಿಸುವ ಆದರ್ಶತನದಿಂದ ಇರಬೇಕು ಎಂದು ಬಯಸುವ ಕುಮಾರಸ್ವಾಮಿ ತಮ್ಮ ದ್ವಂದ್ವ ನಿಲುವುಗಳ ಕಾರಣಕ್ಕಾಗಿಯೇ ತಮ್ಮ ನಾಯಕತ್ವದ ಮೌಲ್ಯವನ್ನು ದಿನೆ ದಿನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಸಿದ್ದರಾಮಯ್ಯ ಅವರು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂದು ತಳ ಬುಡವಿಲ್ಲದ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಅವರು, ತಾವು ಮುಖ್ಯಮಂತ್ರಿ ಆಗಿದ್ದಾಗ ವರ್ಗಾವಣೆಗಳನ್ನು ಮಾಡಿಲ್ಲವೇ? ಅದನ್ನೂ ಅವರು ದಂಧೆ ಎಂದು ಪರಿಗಣಿಸುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಪ್ರಾದೇಶಿಕ ಪಕ್ಷದ ನಾಯಕನಾಗಿ, ರಾಜ್ಯದ ಜನರ ಸಂಕಷ್ಟಗಳಿಗೆ ತೆರೆದ ಮನಸ್ಸಿನಿಂದ ದನಿಯಾಗುವ ಬಹುದೊಡ್ಡ ಜವಾಬ್ದಾರಿ ಕುಮಾರಸ್ವಾಮಿ ಅವರ ಮೇಲಿದೆ. ಆದರೆ, ಅತಂತ್ರ ಸ್ಥಿತಿಯಲ್ಲಿ ಅಧಿಕಾರ ಪಡೆಯುವ ಉದ್ದೇಶ ಹೊಂದಿರುವ ಅವರಿಗೆ, ಜನರ ಬದುಕಿನ ಕಷ್ಟಗಳಾಗಲಿ, ಪ್ರತಿಪಕ್ಷಗಳು ನಿರ್ವಹಿಸುವ ಪಾತ್ರದ ಕುರಿತಾಗಲಿ ತಿಳಿದಿಲ್ಲ ಎಂಬುದಕ್ಕೆ ಅವರ ನಡವಳಿಕೆಗಳೇ ಮತ್ತೆ ಮತ್ತೆ ಸಾಕ್ಷಿ ಎಂದು ಟೀಕಿಸಿದ್ದಾರೆ.