ಕುಮಾರಳ್ಳಿ ಸುಗ್ಗಿ ಉತ್ಸವ ಸಂಪನ್ನ

8spt1
ಸೋಮವಾರಪೇಟೆ ಸಮೀಪದ ಕುಮಾರಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ ಸಬ್ಬಮ್ಮ ದೇವಿ ಸುಗ್ಗಿ ಉತ್ಸವದಲ್ಲಿ ಗ್ರಾಮಸ್ಥರು ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಹೊತ್ತು ಸುಗ್ಗಿಕಟ್ಟೆ ಸುತ್ತ ಪ್ರದಕ್ಷಿಣೆ ಹಾಕಿದರು.
Published on

ಸೋಮವಾರಪೇಟೆ : ತಾಲೂಕಿನ ಕುಮಾರಳ್ಳಿ ಗ್ರಾಮದ ಸಬ್ಬಮ್ಮದೇವಿ ಸುಗ್ಗಿ ಉತ್ಸವವನ್ನು ಸುಗ್ಗಿಕಟ್ಟೆಯಲ್ಲಿ ಶ್ರದ್ಧಾಭಕ್ತಿಯಿಂದ ಇತ್ತೀಚೆಗೆ ಆಚರಿಸಲಾಯಿತು.
ಸುಗ್ಗಿಕಂಬಕ್ಕೆ ಊಲು ಏರಿಸುವ ಮೂಲಕ ಧಾರ್ಮಿಕ ಆಚರಣೆ ಪ್ರಾರಂಭವಾಗಿ, ಪ್ರಾರಂಭದ ದಿನವೇ ಗ್ರಾಮಸ್ಥರು ಮಳೆಗಾಗಿ ಗ್ರಾಮ ದೇವತೆಗೆ ಪ್ರಾರ್ಥನೆ ಸಲ್ಲಿಸಿ ಪೂಜೆ ನೆರವೇರಿಸಿದರು.
ಪ್ರಕೃತಿ ರಕ್ಷಣೆ ಹಾಗೂ ವರ್ಷವಿಡೀ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತರಿಗೆ ವಿಶ್ರಾಂತಿಗೋಸ್ಕರ 8 ದಿನಗಳ ಕಾಲ ಕೆಲಸ ಮಾಡದಿರಲು ಸಂಪ್ರದಾಯದಂತೆ ಆಜ್ಞೆ ನೀಡಲಾಗಿತ್ತು. ಹಸಿ ಮರಗಳನ್ನು ಕಡಿಯುವಂತ್ತಿಲ್ಲ, ಒಣಕಡ್ಡಿಗಳನ್ನು ಮುರಿಯುವಂತಿಲ್ಲ, ಮಣ್ಣಿನ ಕೆಲಸ ಮಾಡುವಂತಿಲ್ಲ ಎಂಬ ಪದ್ಧತಿಯನ್ನು ಸುಗ್ಗಿ ಮುಗಿಯುವ ತನಕ ಆಚರಿಸಲಾಯಿತು.
ಸುಗ್ಗಿ ಕೊನೇ ದಿನ ಸುಗ್ಗಿಕಟ್ಟೆಯಲ್ಲಿ ಬೆಳಗ್ಗಿನ ತನಕ ವಿವಿಧ ಆಚರಣೆಗಳು ನಡೆದವು. ವಾದ್ಯಗೋಷ್ಠಿಯೊಂದಿಗೆ ಸುಗ್ಗಿಕುಣಿತ, ಮಲ್ಲು ಬೆಳಗುವುದು, ಕೋಲಾಟ, ಹುಲಿ ಭಂಗಿ ಕುಣಿತ, ಬಿಲ್ಲು ಪ್ರದರ್ಶನ, ಸೊಡ್ಲುಪೂಜೆ, ಸಾಂಪ್ರದಾಯಿಕ ಕಡವೆ ಬೇಟೆ, ಉತ್ಸವ ಮೂರ್ತಿ ಮೆರವಣಿಗೆ, ಅನ್ನಸಂತರ್ಪಣೆ ನಡೆಯಿತು. ದೇವರ ಒಡೆಕಾರರಾದ ತಮ್ಮಯ್ಯ, ಮನೋಹರ, ಈರಪ್ಪ, ಉದಯ, ಕುಮಾರ್, ಗಣೇಶ, ನಾಗರಾಜು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಸುಗಿ ್ಗಉತ್ಸವ ಸಮಿತಿ ಅಧ್ಯಕ್ಷ ಯು.ಕೆ. ದೇಶರಾಜ್, ಉಪಾಧ್ಯಕ್ಷ ಎಂ.ಎಸ್. ತಮ್ಮಯ್ಯ, ಕಾರ್ಯದರ್ಶಿ ಕಿರಣ್, ಖಜಾಂಚಿ ನವೀನ್, ಸಹ ಖಜಾಂಚಿಗಳಾದ ಕಾರ್ಯಪ್ಪ, ನಿತಿನ್ ಉತ್ಸವದ ಉಸ್ತುವಾರಿ ನೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net