

ಸುಬ್ರಹ್ಮಣ್ಯ: ಪವಿತ್ರ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದ ಮತ್ತು ಸಮೀಪದಲ್ಲಿರುವ ವಾಸುಕಿಗೆ ಕುಕ್ಕೆಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಸೋಮವಾರ ಪೂಜೆ ನೆರವೇರಿಸಿದರು.
ಸಮುದ್ರ ಮಟ್ಟದಿಂದ ಸುಮಾರು 4000 ಅಡಿ ಎತ್ತರವಿರುವ ಪರ್ವತದ ತುತ್ತ ತುದಿಗೆ 10 ಕಿ.ಮೀ. ದೂರ ಕಡಿದಾದ ಬೆಟ್ಟದ ಹಾದಿಯಲ್ಲಿ ಪಾದುಕೆಯಿಲ್ಲದೆ ಕಾಲ್ನಡಿಗೆಯಲ್ಲಿ ಅರ್ಚಕರು ಮತ್ತು ಭಕ್ತರು ತೆರಳಿದರು. ಸೋಮವಾರ ಮುಂಜಾನೆ 5 ಗಂಟೆಗೆ ದೇವಳದ ಅಭಿವೃದ್ಧಿ ಸಮಿತಿ ಸದಸ್ಯ ಮೋಹನ್‌ರಾಂ ಸುಳ್ಳಿ ಯಾತ್ರೆಗೆ ಚಾಲನೆ ನೀಡಿದರು. ಅಭಿವೃದ್ಧಿ ಸಮಿತಿ ಸದಸ್ಯ ಪ್ರಸನ್ನ ದರ್ಬೆ ಧ್ವಜ ಹಸ್ತಾಂತರಿಸಿದರು. ಬಳಿಕ ಅಭಿವೃದ್ಧಿ ಸಮಿತಿ ಸದಸ್ಯರು ಸೇರಿದಂತೆ ನೂರಕ್ಕೂ ಅಧಿಕ ಭಕ್ತರು ಪ್ರಯಾಣ ಆರಂಭಿಸಿ ಬಿಸಿಲೆ, ಶಾಂತಳ್ಳಿಗೆ ತೆರಳಿ, ಅಲ್ಲಿನ ದೇವಳದ ಬಳಿ ವಾಹನ ನಿಲ್ಲಿಸಿ ಕಡಿದಾದ ಹಾದಿಯಲ್ಲಿ ಪರ್ವತವೇರಿದರು.
ಕುಕ್ಕೆ-ಕುಮಾರಪರ್ವತಕ್ಕೆ ಪವಿತ್ರ ಸಂಬಂಧ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕುಮಾರಪರ್ವತಕ್ಕೆ ಪವಿತ್ರ ಸಂಬಂಧವಿದೆ. ಕುಮಾರಪರ್ವತದ ತುತ್ತ ತುದಿಯಲ್ಲಿನ ಶಿಲೆಯಲ್ಲಿ ಕುಮಾರಸ್ವಾಮಿಯ ಪಾದಗಳ ಪಡಿಯಚ್ಚು ಇದೆ. ಇದರ ಪಕ್ಕದಲ್ಲಿ ವಾಸುಕಿ ನೆಲೆಯಾಗಿದ್ದಾರೆ. ಜಾತ್ರೋತ್ಸವ ಕೊನೆಯಾದ 10 ದಿನಗಳ ಒಳಗೆ ಕುಮಾರಪರ್ವತಕ್ಕೆ ದೇವಳದ ಪ್ರಧಾನ ಅರ್ಚಕರೇ ತೆರಳಿ ಕುಮಾರ ಪಾದಗಳಿಗೆ ಮತ್ತು ವಾಸುಕಿಗೆ ಅಭಿಷೇಕ ನೆರವೇರಿಸಿ ಪೂಜೆ ಮಾಡುವುದು ಸಂಪ್ರದಾಯ.
ಕುಮಾರಪರ್ವತದಲ್ಲಿ ಕುಮಾರಸ್ವಾಮಿಯು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಕುಮಾರಪರ್ವತದಲ್ಲಿ ಹುಟ್ಟುವ ಕುಮಾರಧಾರೆಯಲ್ಲಿ ತೊಳೆದ. ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆ ಕ್ಷೇತ್ರದಲ್ಲಿ ನೆಲೆಯಾದ ಎಂದು ಕ್ಷೇತ್ರ ಪುರಾಣ ಉಲ್ಲೇಖಿಸಿದೆ.