ಸ್ಥಾಯಿ ಸಮಿತಿಗೆ ಕುಮಾರ ಅಧ್ಯಕ್ಷ

Standing commity
Published on

ಶಿರಸಿ: ಶಿರಸಿ ನಗರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ 21ನೇ ವಾರ್ಡ್‌ನ ಕುಮಾರ ಕೆರಿಯಾ ಬೋರ್ಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪವಿಭಾಗಾಧಿಕಾರಿ ಅಪರ್ಣಾ ರಮೇಶ್ ನೇತೃತ್ವದಲ್ಲಿ ಮಂಗಳವಾರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕುಮಾರ ಬೋರ್ಕರ್ ಒಬ್ಬರೇ ಉಮೇದುದಾರಿಕೆ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆದಿದೆ. ಅದರಂತೆ ಸ್ಥಾಯಿ ಸಮಿತಿಗೆ ಸದಸ್ಯರಾಗಿ ರಾಘವೇಂದ್ರ ಶೆಟ್ಟಿ, ಶರ್ಮಿಳಾ ಮಾದನಗೇರಿ, ನಾಗರಾಜ ನಾಯ್ಕ, ಸುಮಿತ್ರಾ ಗಾಂವಕರ್, ಶಾರದಾ ಶೇಟ್, ರಾಘವೇಂದ್ರ ಶೆಟ್ಟಿ, ದಯಾ ನಾಯ್ಕ, ರುಬೇಕಾ ಫರ್ನಾಂಡಿಸ್, ಖಾದರ ಆನವಟ್ಟಿ, ಫ್ರಾನ್ಸಿಸ್ ನರೋನ್ಹಾ ಆಯ್ಕೆಯಾದರು. ಪೌರಾಯುಕ್ತ ಕಾಂತರಾಜು ಇದ್ದರು.

ಅಸಮಾಧಾನ

ಶಿರಸಿ ನಗರಸಭೆಯ 31 ಸ್ಥಾನಗಳಲ್ಲಿ 9 ಕಾಂಗ್ರೆಸ್ ಸದಸ್ಯರಿದ್ದಾರೆ. ಸ್ಥಾಯಿ ಸಮಿತಿಯನ್ನು ಕಾಂಗ್ರೆಸ್ ಸದಸ್ಯರನ್ನೂ ಒಳಗೊಂಡು ರಚಿಸಲಾಗಿತ್ತು. ಆದರೆ, ಸದಸ್ಯ ಯಶವಂತ ಮರಾಠೆ ಆಕ್ರೋಶ ವ್ಯಕ್ತಪಡಿಸಿ, ಇದುವರೆಗೂ ಸ್ಥಾಯಿ ಸಮಿತಿಯಲ್ಲಿ ನನಗೆ ಅವಕಾಶ ಲಭಿಸಿಲ್ಲ. ಅಲ್ಲದೆ ಸ್ಥಾಯಿ ಸಮಿತಿ ಪಟ್ಟಿ ಮಾಡುವ ವೇಳೆ ನನ್ನ ಗಮನಕ್ಕೂ ತಂದಿಲ್ಲ. ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆಯನ್ನು ಕೆಲ ದಿನ ಮುಂದೂಡಿ ಎಂದು ಆಕ್ಷೇಪಿಸಿದರು.

ಆದರೆ, ಇದಕ್ಕೊಪ್ಪದ ಉಳಿದ ಸದಸ್ಯರು, ಮಾರಿಕಾಂಬಾ ದೇವಿ ಜಾತ್ರೆ ಎದುರಿನಲ್ಲಿದೆ. ಅಲ್ಲದೆ ಲೋಕಸಭಾ ಚುನಾವಣೆ ಘೋಷಣೆಯಾದರೆ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವೂ ಖಾಲಿ ಇರುವ ಕಾರಣ ವಿಳಂಬ ಮಾಡುವುದ ಸರಿಯಲ್ಲ ಎಂದರು. ಉಪವಿಭಾಗಾಧಿಕಾರಿ ಅಪರ್ಣಾ ರಮೇಶ, ಸ್ಥಾಯಿ ಸಮಿತಿ ಆಯ್ಕೆ ಕುರಿತಂತೆ ಎಲ್ಲ ಸದಸ್ಯರಿಗೆ ಮುಂಚಿತವಾಗಿಯೇ ನೊಟೀಸ್ ನೀಡಿ ತಿಳಿಸಲಾಗಿತ್ತು ಎಂದರು. ಇದರಿಂದ ಅಸಮಾಧಾನಗೊಂಡ ಯಶವಂತ ಮರಾಠೆ ಸಭೆಯಿಂದ ಹೊರ ನಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net