

ಮಂಡ್ಯ: ಹನ್ನೆರಡನೇ ಶತಮಾನದ ಕಾಯಕ ಯೋಗಿ ಕುಳುವ ನುಲಿಯ ಚಂದಯ್ಯ ಅವರ 916ನೇ ಜಯಂತಿ ಕಾರ್ಯಕ್ರಮವನ್ನು ಸೆ.16ರಂದು ಬೆಳಗ್ಗೆ 11 ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಳುವ ಮಹಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ ತಿಳಿಸಿದರು.
ನುಲಿಯ ಚಂದ್ರಯ್ಯ ಅವರು 12ನೇ ಶತಮಾನದ ಬಸವಾದಿ ಪ್ರಥಮರ ಸಮಕಾಲೀನ ಶಿವಶರಣ ಕಾಯಕ ಸದ್ಭಾವಿ, ದಾಸೋಹಕ್ಕೆ ಮಾದರಿಯಾದ ಸರ್ವ ಶ್ರೇಷ್ಟ ಶರಣರಾಗಿದ್ದರು. ಇಂತಹವರ ಜಯಂತಿ ಆಚರಣೆಯನ್ನು ರಾಜ್ಯಸರ್ಕಾರ ಆಚರಿಸುತ್ತಿರುವುದು ಶ್ಲಾಘನೀಯ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯ ಜನಪ್ರತಿನಿಧಿಗಳ ಜತೆಗೆ ದೇವನಹಳ್ಳಿ ಕ್ಷೇತ್ರದ ಶಾಸಕ ಜಿ.ಚಂದ್ರಣ್ಣ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಸಮುದಾಯದ ಎಲ್ಲರೂ ಸಮಾರಂಭದಲ್ಲಿ ಭಾಗವಹಿಸಬೇಕು. ರಾಷ್ಟ್ರದ ಸುಮಾರು 16 ರಾಜ್ಯಗಳಲ್ಲಿ ನಮ್ಮ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಕೆಲ ರಾಜ್ಯಗಳಲ್ಲಿ ಸಮುದಾಯವದವರಿಗೆ ಸರ್ಕಾರಗಳು ವಿಶೇಷ ಸೌಲಭ್ಯ ನೀಡಿವೆ. ಆದರೆ ಕರ್ನಾಟಕದಲ್ಲಿ ಶಾಶ್ವತ ಅಲೆಮಾರಿ ಆಯೋಗ ಮಾಡುವಂತೆ ಒತ್ತಾಯ ಮಾಡುತ್ತಿದ್ದೇವೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇನ್ನೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಮುಖಂಡರಾದ ವೆಂಕಟೇಶ್ ಗಣಂಗೂರು, ರಾಮಕೃಷ್ಣ, ಕೆ.ವಿ.ನಾಗರಾಜು, ಕೃಷ್ಣಕುಮಾರ್ ಇದ್ದರು.