

ಹರಿಹರ: ಸಂಸ್ಕಾರ, ಸಂಸ್ಕೃತಿ ಮತ್ತು ಸಾಹಿತ್ಯದ ಅರಿವು ಇರುವ ವ್ಯಕ್ತಿ ಎತ್ತರಕ್ಕೆ ಏರುವ ಜತೆಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಲ್ಲ ಎಂದು ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿ ಜಿ.ಕೆ. ಕುಲಕರ್ಣಿ ಹೇಳಿದರು.
ಚಿಂತನ ಪ್ರತಿಷ್ಠಾನ ಮತ್ತು ಪ್ರಗತಿಪರ ಬರಹಗಾರರ ಒಕ್ಕೂಟದಿಂದ ನಗರದ ಕೋಟೆ ಬಡಾವಣೆಯಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯ ಕುರಿತು ಉಪನ್ಯಾಸ ನೀಡಿದರು.
ಸಂಸ್ಕಾರದಿಂದ ಸಂಸ್ಕೃತಿ, ಸಂಸ್ಕೃತಿಯಿಂದ ಸಾಹಿತ್ಯ ಬೆಳೆದಿದೆ. ಸಾಹಿತ್ಯ ಆಯಾ ಕಾಲದ ಜನಜೀವನ ತಿಳಿಸುತ್ತದೆ. ಹಿಂದಿನ ಕಾಲದ ಜನರು ಶಾಸನಗಳ ಮೂಲಕ ಜನಜೀವನದ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು.
ಕಲ್ಲು, ಮಣ್ಣಿನಲ್ಲಿರುವ ವಜ್ರ ಹಾಗೂ ಚಿನ್ನವನ್ನು ಸುದೀರ್ಘ ಪ್ರಕ್ರಿಯೆ ಮೂಲಕ ಹೊರತೆಗೆದಾಗ ಬೆಲೆ ಸಿಗುತ್ತದೆ. ಅದೇ ರೀತಿ ಸಂಸ್ಕಾರ ಮತ್ತು ಸಂಸ್ಕೃತಿ ಇರುವ ವ್ಯಕ್ತಿ ಹಾಗೂ ಸಮುದಾಯವು ಜನಮನ ಸೆಳೆಯುತ್ತದೆ. ಸಮಾಜದ ಪ್ರಗತಿಗೆ ಸಂಸ್ಕಾರ ಮುಖ್ಯ ಕಾರಣ. ನಂತರ ಸಂಸ್ಕೃತಿ, ಸಾಹಿತ್ಯ ಬೆಳೆಯುತ್ತದೆ ಎಂದು ತಿಳಿಸಿದರು.
ಮನುಷ್ಯನಲ್ಲಿ ಸಹಜ ಗುಣ ಇರಬೇಕು. ಸಮಾಜದಲ್ಲಿ ನೊಂದವರು ಹಾಗೂ ದುರ್ಬಲರಿಗೆ ಸಹಾಯ ಮಾಡುವುದನ್ನು ಕರ್ತವ್ಯವನ್ನಾಗಿ ಮಾಡಿಕೊಳ್ಳಬೇಕು. ಸಂಸ್ಕಾರದಿಂದ ಒಳ್ಳೆಯ ಮಾನವನಾಗಲು ಸಾಧ್ಯ. ಎಲ್ಲರೂ ಹೃದಯವಂತರಾಗಿ ಸದೃಢ ಸಮಾಜ ಕಟ್ಟಲು ಸಹಕರಿಸಬೇಕು ಎಂದು ಹೇಳಿದರು.
ಚಿಂತನ ಪ್ರತಿಷ್ಠಾನದ ಸಂಚಾಲಕ ಸುಬ್ರಹ್ಮಣ್ಯ ನಾಡಿಗೇರ್, ಸೌಮ್ಯಾ, ನಾಗರತ್ನ, ಕಾರ್ವಿುಕ ಮುಖಂಡ ಎಚ್.ಕೆ.ಕೊಟ್ರಪ್ಪ, ಶ್ಯಾಮಲಾ, ಮಂಜಮ್ಮ, ರಾಧಾ ಹನುಮಂತಪ್ಪ, ಚಂದನಾ ವೈ.ನೀಲಪ್ಪ ಇದ್ದರು.