

ಕೂಡ್ಲಿಗಿ: ಅಂಗವಿಕಲತೆ ಶಾಪವಲ್ಲ. ಅವರಿಗೂ ವಿಶೇಷವಾದ ಶಕ್ತಿ ಇದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲೆಯ ಅಥಣಿಯ ನಡೆದಾಡುವ ಕಂಪ್ಯೂಟರ್ ಖ್ಯಾತಿಯ ಅಂಧ ಯುವಕ ಬಸವರಾಜ ಉಮರಾಣಿ ಹೇಳಿದರು.
ಪಟ್ಟಣದ ಮೈದಾನ ಗೆಳೆಯರ ಬಳಗ, ಜೆಸಿಐ ಗೋಲ್ಡನ್ ಹಾಗೂ ಗಾಂಧಿ ಸ್ಮಾರಕ ಸಮಿತಿ ಬುಧವಾರ ಸಂಜೆ ಏರ್ಪಡಿಸಿದ್ದ ಚಿಂತನ ಚೇತನ ಕಾರ್ಯಕ್ರಮದಲ್ಲಿ ಮಾತಾನಾಡಿದರು. ಪ್ರತಿಯೊಬ್ಬರಲ್ಲೂ ವಿಶೇಷ ಬುದ್ಧಿಶಕ್ತಿ ಇರುತ್ತದೆ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಸಹ ನಮ್ಮ ವಿವೇಚನೆಗೆ ಬಿಟ್ಟದ್ದು. ಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಂಡು ನಿರ್ದಿಷ್ಟ ಗುರಿ ತಲುಪಬೇಕು. ಆದರ್ಶ ವ್ಯಕ್ತಿಗಳ ಮಾರ್ಗದಲ್ಲಿ ನಡೆಯಬೇಕು. ಸಾಧನೆಗೆ ಸತತ ಪರಿಶ್ರಮ ಅಗತ್ಯ. ಮಕ್ಕಳಿಗೆ ಪಾಲಕರು ಮೊಬೈಲ್ ನೀಡದೆ ಪುಸ್ತಕಗಳನ್ನು ಕೊಟ್ಟು ಜ್ಞಾನ ಭಂಡಾರ ಹೆಚ್ಚಿಸಬೇಕು. ಅದರಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ನಂತರ ಬಸವರಾಜ ಉಮರಾಣಿ, ಒಂದು ಗಂಟೆ ಕಾಲ ಕೇಳಿದ ಲೆಕ್ಕಗಳಿಗೆ ಕ್ಷಣಮಾತ್ರದಲ್ಲಿ ಉತ್ತರಿಸಿದರು. ಸರಿಯಾದ ವೇಳೆ ಕರಿತು ನಿಖರ ಉತ್ತರ, 30 ಅಂಕಿಗಳ ಲೆಕ್ಕಗಳನ್ನು ಕೂಡುವ, ಕಳೆಯುವ ಹಾಗೂ ಭಾಗಿಸುವುದನ್ನು ಕ್ಷಣದಲ್ಲೇ ಉತ್ತರಿಸಿ ಅಚ್ಚರಿ ಮೂಡಿಸಿದರು. ಸುಮಾರು ಮೂವತ್ತು ಸಾವಿರ ಫೋನ್ ನಂಬರ್ ನೆನಪಿನಲ್ಲಿಟ್ಟುಕೊಂಡಿವುದಾಗಿ ಹೇಳಿದಾಗ ಸಭಿಕರು ಆಶ್ಚರ್ಯ ವ್ಯಕ್ತಪಡಿಸಿದರು. ಕೂಡ್ಲಿಗಿ ಡಿವೈಎಸ್ಪಿ ಹರೀಶ್, ಸಿಪಿಐ ವಸಂತ ಅಸೋದೆ, ಗಾಂಧಿ ಸ್ಮಾರಕ ಸಮಿತಿಯ ಡಿ.ನಾಗರಾಜ್, ಜೆಸಿಐ ಅಧ್ಯಕ್ಷ ಅಬೂಬಕರ್, ಕೆ.ನಾಗರಾಜ್, ಜಿಲಾನ್, ಐಲಿ ರವಿಕುಮಾರ್, ಶಿಕ್ಷಕ ಶ್ರೀಕಾಂತ್, ಕೃಷ್ಣ ಇತರರಿದ್ದರು.