

ಮಂಗಳೂರು: ಕುಲಾಲ ಸಮಾಜ ಮಾನವೀಯ ಮೌಲ್ಯ, ಸ್ವಾಮಿನಿಷ್ಠೆ, ಭಕ್ತಿಗೆ ಹೆಸರುವಾಸಿಯಾದ ಸಜ್ಜನರ ಸಮಾಜ. ಅನೇಕ ಶೋಷಣೆಗಳನ್ನು ಎದುರಿಸಿಕೊಂಡು ಬಂದು ಸಮಾಜದ ಎಲ್ಲ ಜಾತಿಯವರೊಂದಿಗೂ ಅನ್ಯೋನ್ಯತೆಯಿಂದ ಬೆರೆತು ಐಕ್ಯತೆಯ ಸಂದೇಶ ಸಾರಿದೆ ಎಂದು ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಕುಲಾಲ ಪ್ರತಿಷ್ಠಾನ ಮಂಗಳೂರು ವತಿಯಿಂದ ಮಂಗಳೂರಿನ ಅಂಬೇಡ್ಕರ್ ಭವನದ ದಿ. ಸುಮಿತ್ರ ರಾಜು ಸಾಲ್ಯಾನ್ ವೇದಿಕೆಯಲ್ಲಿ ಭಾನುವಾರ ನಡೆದ ಕುಲಾಲ ಪರ್ಬವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಒಂದು ಸಮಾಜ ಒಗ್ಗಟ್ಟು ಕಳೆದುಕೊಂಡರೆ ನಮ್ಮತನವನ್ನು ಕಳೆದುಕೊಂಡಂತೆ. ಕುಲಾಲರ ಸಮಾಜದಲ್ಲಿ ಯಾವುದೇ ವ್ಯತ್ಯಾಸ, ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಪ್ರೀತಿ, ಬಾಂಧವ್ಯ ಮತ್ತು ಐಕಮತ್ಯದಿಂದ ಎದುರಿಸಿ ಮುನ್ನಡೆಯಬೇಕು. ರಾಜಕೀಯವಾಗಿಯೂ ಸಮುದಾಯ ಬೆಳೆಯಬೇಕು. ಆ ನಿಟ್ಟಿನಲ್ಲಿ ನಾಯಕರನ್ನು ಬೆಳೆಸಬೇಕು. ರಾಜಕೀಯ ಶಕ್ತಿಯೂ ದೊರೆತಾಗ ಸಮಾಜದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.
ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಮಾಜಿ ಅಧ್ಯಕ್ಷ ಎಂ.ಪಿ.ಬಂಗೇರ ಮಾತನಾಡಿ, ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಟ್ಟಿರುವುದು, ಅಶಕ್ತ ಬಂಧುಗಳಿಗೆ ಆರ್ಥಿಕ ಸಹಾಯ ನೀಡುವ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸಮ್ಮಾನಿಸಿರುವುದು ಶ್ಲಾಘನೀಯ ಎಂದರು.
ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕುಲಾಲ್ ಮಂಗಳಾದೇವಿ ಅಧ್ಯಕ್ಷತೆ ವಹಿಸಿದ್ದರು. ಕುಲಶೇಖರ ಶ್ರೀ ಧರ್ಮಶಾಸ್ತ್ರ ಮಂದಿರ ಟ್ರಸ್ಟ್ನ ಅಧ್ಯಕ್ಷ ರಾಮಪ್ರಸಾದ್ ಎಸ್., ಬೆಳ್ಮಣ್ ಕುಂಭ ನಿಧಿ ಸಹಕಾರಿ ಕಾರ್ಯಾಧ್ಯಕ್ಷ ಕುಶ ಆರ್. ಮೂಲ್ಯ, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಶಿವಾನಂದ ಕನಡ, ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಅಣ್ಣಯ್ಯ ಕುಲಾಲ್ ಸೇರಿದಂತೆ ಹಲವರು ಇದ್ದರು.
ಕುಲಾಲ ಸಮಾಜದ 25 ಸಾಧಕರಿಗೆ ‘ಕುಲಾಲ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಿತು.
ಟ್ರಸ್ಟಿ ಲಕ್ಷ್ಮಣ್ ಕುಂದರ್ ಸ್ವಾಗತಿಸಿದರು. ನವೀನ್ ಪುತ್ತೂರು ಮತ್ತು ಪ್ರವೀಣ್ ಬಸ್ತಿ ಕಾರ್ಯಕ್ರಮ ನಿವಹಿಸಿದರು. ಸುಧಾ ಪುರುಷೋತ್ತಮ್ ವಂದಿಸಿದರು.
---------------------
ಒಗ್ಗಟ್ಟು ಮತ್ತು ಪ್ರೀತಿ ಸಮಾಜದ ಶಕ್ತಿ. ಅಂತೆಯೇ ಕುಲಾಲ ಸಮುದಾಯ ಕೂಡ ಒಗ್ಗಟ್ಟಿನಿಂದ ಮುನ್ನಡೆದು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಇದು ಸಮಾಜಮುಖಿ ಕಾರ್ಯಕ್ರಮ. ಸಮಾಜ ಮುಂದುವರೆಯಬೇಕಾದರೆ, ಸರ್ವತೋಮುಖವಾಗಿ ಬೆಳೆಯಬೇಕಾದರೆ ಇಂತಹ ಟ್ರಸ್ಟ್ಗಳ ಮೂಲಕ ನಿರಂತರ ಪ್ರೋತ್ಸಾಹದ ಅಗತ್ಯವಿದೆ. ಪ್ರತೀ ವರ್ಷ ನಿರಂತರವಾಗಿ ಇಂತಹ ಕಾರ್ಯಕ್ರಮಗಳು ನಡೆಯಲಿ.
-ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ,
ಶ್ರೀಧಾಮ ಮಾಣಿಲ