ಆಗಸ್ಟ್ 18 ರಂದು ಕುಳಾಯಿಯಲ್ಲಿ ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಾಲಯದ ಉದ್ಘಾಟನೆ;  1.5 ಎಕರೆ ವಿಸ್ತೀರ್ಣದ 20 ಕೋಟಿ ರೂ ವೆಚ್ಚದ ಯೋಜನೆ

IMG-20240816-WA0187(1)
Published on

 ವಿಜಯವಾಣಿ ಸುದ್ದಿಜಾಲ ಮಂಗಳೂರು
ಸುರತ್ಕಲ್‌ನ ಕುಳಾಯಿ (ಕೊಡಿಕೆರೆಯ ಸಮೀಪ) ಯಲ್ಲಿ ಸುಮಾರು 20 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 1.5 ಎಕರೆ ವಿಸ್ತೀರ್ಣದ ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಾಲಯದ ಉದ್ಘಾಟನೆಯು ಆಗಸ್ಟ್ 18 ರಂದು ಮುಂಜಾನೆ 7 ಕ್ಕೆ ನಡೆಯಲಿದ್ದು, ಆ.19 ರಂದು ರಾತ್ರಿ ತನಕ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸ್ಕಾನ್ ಮಂಗಳೂರು ಅಧ್ಯಕ್ಷ ನಾಮನಿಷ್ಠ ದಾಸ್ ಅವರು, ಬೆಳಗ್ಗೆಯಿಂದ ವಿವಿಧ ಧಾರ್ಮಿಕ ವಿಧಿವಿದಾನಗಳು ನಡೆಯಲಿವೆ. ಸಂಜೆ 200 ಮಂದಿ ಭಕ್ತರು ದೀಕ್ಷೆ ಸ್ವೀಕರಿಸುವರು ಎಂದರು.
ರಷ್ಯಾ, ಅಮೇರಿಕಾ, ಆಸ್ಟ್ರೇಲಿಯಾ ಸಹಿತ ದೇಶ ವಿದೇಶಗಳ 500 ಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಾಗಲೇ ಆಗಮಿಸಿದ್ದಾರೆ. ಸಾರ್ವಜನಿಕರು ಕೂಡ ಭಾಗವಹಿಸಬಹುದು ಎಂದರು.
ಬಹುಪಯೋಗಿ ಸಭಾಂಗಣ:
ನೂತನ ದೇವಾಲಯ ಸಂಕೀರ್ಣವು ದೇವಸ್ಥಾನ, ಅನ್ನದಾನ ಮತ್ತು ವಿಚಾರಸಂಕಿರಣಕ್ಕೆ ಪ್ರತ್ಯೇಕ ಹಾಲ್‌ಗಳು. ನ್ನೊಂದು ತೆರೆದ ಹಾಲ್, ಬ್ರಹ್ಮಚಾರಿ ಆಶ್ರಮ, ಡಾರ್ಮಿಟರಿಗಳು, ಗೋವಿಂದ ರೆಸ್ಟೋರೆಂಟ್, ಅತಿಥಿ ಕೊಠಡಿ, ಕಲ್ಯಾಣಿ, ಗ್ರಂಥಾಲಯ ಮತ್ತು ಪುಸ್ತಕ ಅಂಗಡಿ ಇತ್ಯಾದಿಗಳನ್ನು ಒಳಗೊಂಡಿದೆ. ಭಗವದ್ಗೀತೆಯ ಆಫ್‌ಲೈನ್ ಅಧ್ಯಯನಕ್ಕಾಗಿ ಭಕ್ತರು ದೇವಾಲಯಕ್ಕೆ ಬಂದು ಓದಬಹುದಾದ ವಸತಿಗೃಹ ಗೀತಾ ಕಾಲೇಜು ಸಹ ಇದೆ ಎಂದು ಅವರು ವಿವರಿಸಿದರು.
ವೈಶಿಷ್ಟೃತೆ
ಈ ದೇವಾಲಯವನ್ನು ಇಸ್ಕಾನ್ ಆನ್‌ಲೈನ್ ಭಗವದ್ಗೀತಾ ಕೋರ್ಸ್ ಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ದೇಣಿಗೆಯ ಮೂಲಕ ನಿರ್ಮಿಸಲಾಗಿದೆ. ಕರೊನಾ -19 ಸಮಯದಲ್ಲಿ (ಜೂನ್ 2020) ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಾಲಯದ ವತಿಯಿಂದ ಆರಂಭಿಸಲಾದ ‘18 ದಿನಗಳಲ್ಲಿ ಗೀತೆಯನ್ನು ಅರ್ಥಮಾಡಿಕೊಳ್ಳಿ’ ಆನ್ಲೈನ್ ಕೋರ್ಸ್ ವಿಶೇಷ ಯಶಸ್ಸನ್ನು ಗಳಿಸಿತು. ಭಗವದ್ಗೀತೆಯ ಆಳವಾದ ತತ್ವಶಾಸ್ತ್ರಗಳನ್ನು ಕಲಿಸಲು ಉದ್ದೇಶಿಸಿರುವ ಆ ಕೋರ್ಸ್‌ನ್ನು ಇಂಗ್ಲಿಷ್ ಮತ್ತು 12 ಬೇರೆ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಪಡೆದುಕೊಂಡರು ಎಂದು ದೇವಸ್ಥಾನದ ಕಾರ್ಯದರ್ಶಿ ಶ್ರೀವಾಸಾಂಗನ ಕೀರ್ತನದಾಸ ಅವರು ಹೇಳಿದರು.
ಭವಿಷ್ಯದ ಯೋಜನೆ:
ದೇವಾಲಯದ ಸಂಕೀರ್ಣದಲ್ಲಿ ಈಗಾಗಲೇ ಗೀತಾ ಕಾಲೇಜು ನಿರ್ಮಾಣ ಪ್ರಾರಂಭಿಸಿದ್ದೇವೆ. ಈ ಕಾಲೇಜು ಪ್ರಪಂಚದಾದ್ಯಂತ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಸಮಗ್ರ ಅಧ್ಯಯನವನ್ನು ಮಾಡಿಸುವ ಮತ್ತು ಆ ತತ್ತ್ವಶಾಸ್ತ್ರವನ್ನು ತಮ್ಮ ಜೀವನದಲ್ಲಿ ಅಳವಡಿಸುವ ಅವಕಾಶವನ್ನು ಒದಗಿಸುತ್ತದೆ. ಈ ಕಾಲೇಜು ದೇವಾಲಯ ಸಂಕೀರ್ಣದ ಮುಖ್ಯ ಭಾಗವಾಗಿದೆ ಎಂದು ಅವರು ತಿಳಿಸಿದರು.
ದೇವಸ್ಥಾನದ ಭಕ್ತರಾದ ಸದಾತುಷ್ಟ ಅಚ್ಯುತದಾಸ ಮತ್ತು ಮುರಳೀಧರ ಭಾಟಿಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net