

ಕುಕನೂರು: ನರೇಗಾ ಯೋಜನೆಯಡಿ ನಿಗದಿತ ಗುರಿಗಿಂತ ಅಧಿಕ ಮಾನವ ದಿನಗಳನ್ನು ಇಲ್ಲಿನ ತಾಪಂ ಸೃಜಿಸಿರುವುದು ಕಾರ್ಮಿಕರಿಗೆ ವರದಾನವಾಗಿದೆ. ಅಲ್ಲದೆ ಗುಳೆ ಹೋಗುವುದನ್ನು ತಪ್ಪಿಸಿದೆ.
2024-25 ನೇ ಸಾಲಿನ ನಿಗದಿತ 4.10 ಲಕ್ಷ ಗುರಿಯಲ್ಲಿ 4.60 ಲಕ್ಷ ಮಾನವ ದಿನಗಳನ್ನು ಸೃಜಿಸಿ ಸಾಧನೆ ಮಾಡಿದೆ. ಈ ಪೈಕಿ ತಾಲೂಕಿನ ಕುದರಿಮೋತಿ ಗ್ರಾಪಂನಲ್ಲಿಯೇ 56,686 ಮಾನವ ದಿನ ಸೃಜನೆಗೊಂಡಿವೆ. ಜತೆಗೆ, ತಾಲೂಕಿನ ಎಲ್ಲ ಗ್ರಾಪಂಗಳು ಕೂಲಿ ಕಾರ್ಮಿಕರಿಗೆ ಸಾಲಿನಲ್ಲಿ ಹೆಚ್ಚು ಕೆಲಸ ಒದಗಿಸಿದ್ದು, ವಾರ್ಷಿಕ ಗುರಿಗಿಂತ ಅಧಿಕ ಸಾಧನೆ ಮಾಡಿ ಕಾರ್ಮಿಕರ ದುಡಿಮೆಗೆ ನೆರವಾಗಿದೆ.
ಕುಕನೂರು ತಾಲೂಕು ಭೌಗೋಳಿಕವಾಗಿ ಬಯಲುಸೀಮೆ ಪ್ರದೇಶವಾಗಿದೆ. ಅತೀ ಕಡಿಮೆ ಅಂದರೆ, 400 ಎಂ.ಎಂ ರಿಂದ 500 ಎಂ.ಎಂ ಮಾತ್ರ ಅನಿಶ್ಚಿತತೆ ಮಳೆಯಾಗುತ್ತದೆ. ಇದರಿಂದ ಬಹುಪಾಲು ಕೃಷಿಕರು ಮಾನ್ಸೂನ್ ಹೊರತುಪಡಿಸಿದ ದಿನಗಳಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ನಗರ ಪ್ರದೇಶಗಳಿಗೆ ಕೆಲಸ ಅರಸಿ ಗುಳೆ ಹೋಗುವುದು ತಪ್ಪಿಲ್ಲ. ಆದರೆ, ನರೇಗಾ ಯೋಜನೆ ಮೂಲಕ ಗ್ರಾಮೀಣ ಜನರಿಗೆ ನಿಗದಿತ ಮಾನವ ದಿನಗಳವರೆಗೆ ಕೆಲಸ ನೀಡಿ ಭದ್ರತೆ ನೀಡಿದೆ.
ತಾಲೂಕಿನ ಒಟ್ಟು 15 ಗ್ರಾಪಂಗಳಲ್ಲಿ ಸಕಾಲದಲ್ಲಿ ಕೆಲಸ ನೀಡಿದ್ದರಿಂದ 4,60,468 ಮಾನವ ದಿನ ಸೃಜನೆ ಮಾಡಿದೆ. 4,475 ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಅಲ್ಲದೇ ಮಹಿಳಾ ಕಾರ್ಮಿಕರನ್ನು ಉತ್ತೇಜಿಸಲು ವರ ಪಾಲ್ಗೊಳ್ಳುವಿಕೆಯನ್ನು ಶೇ.53.53 ಹೆಚ್ಚಿಸಿದೆ. ಮಣ್ಣು, ನೀರು ಮತ್ತು ಸಸ್ಯ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲ ಬಲಪಡಿಸುವ ಕಾಮಗಾರಿಗಳನ್ನು ಶೇ.65 ಅನುಷ್ಠಾನಗೊಳಿಸಿದ್ದು, ಒಟ್ಟು 15.34 ಕೋಟಿ ರೂ. ಅನುದಾನ ಬಳಕೆ ಮಾಡಿದೆ.
ಕುದರಿಮೋತಿ ಗ್ರಾಪಂ ಅತೀ ಹೆಚ್ಚು ಕೂಲಿಕಾರರಿಗೆ ಕೆಲಸ ನೀಡಿ, 56,686 ಮಾನವ ದಿನ ಸೃಜನೆ ಮಾಡಲಾಗಿದೆ. ತಳಕಲ್ ಗ್ರಾಪಂನಲ್ಲಿ ಮಹಿಳೆಯರಿಗೆ ಅತೀ ಹೆಚ್ಚು ಕೆಲಸ ನೀಡಿ ಶೇ.68 ಮಹಿಳಾ ಕಾರ್ಮಿಕರು ಪಾಲ್ಗೊಳ್ಳುವಿಕೆಗೆ ನೆರವಾಗಿದ್ದು, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಬಾಕಿ ಗ್ರಾಪಂಗಳು ಶ್ರಮಿಸಿವೆ.
ಕೋಟ್: ತಾಲೂಕಿನ ಎಲ್ಲ ಗ್ರಾಪಂಗಳ ಸಿಬ್ಬಂದಿ ಹೆಚ್ಚು ಕಾಳಜಿ ವಹಿಸಿ, ಕೂಲಿಕಾರರಿಗೆ ಕೆಲಸ ನೀಡುವ ಮೂಲಕ ಗುಳೆ ಹೋಗುವುದನ್ನು ತಪ್ಪಿಸಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಹೆಚ್ಚು ಸಹಕಾರಿಯಾಗಿದೆ.
> ಸಂತೋಷ ಬಿರಾದಾರ ಪಾಟೀಲ್. ತಾಪಂ ಇಒ, ಕುಕನೂರು.