

ಕುಕನೂರು: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿ ಸಾಧಿಸಲು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ತಾಪಂ ಇಒ ಸಂತೋಷ ಬಿರಾದಾರ್ ಪಾಟೀಲ್ ಹೇಳಿದರು.
ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತ ಆ.15, 1947ರಲ್ಲಿ ಸ್ವಾತಂತ್ರೃಗೊಂಡರೆ, ಕಲ್ಯಾಣ ಕರ್ನಾಟಕ ಮಾತ್ರ ಭಾರತದಲ್ಲಿ ವಿಲೀನಗೊಂಡಿರಲಿಲ್ಲ. ಆಗಿನ ಹೈದ್ರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿ ವಿಲೀನಗೊಳ್ಳಲು ಒಪ್ಪಿರಲಿಲ್ಲ.
ಅಂದಿನ ಕೇಂದ್ರ ಗೃಹ ಸಚಿವ ಸರ್ದಾರ್ ವಲ್ಲಬಭಾಯ್ ಪಟೇಲ್ ಅವರು ಆಪರೇಷನ್ ಪೋಲೋ ಮಿಲಿಟರಿ ಕಾರ್ಯಾಚರಣೆ ನಡೆಸಬೇಕಾಯಿತು. ಕೊನೆಗೆ ಹೆದರಿದ ನಿಜಾಮ ಭಾರತದಲ್ಲಿ ತನ್ನ ರಾಜ್ಯವನ್ನು ವಿಲೀನಗೊಳಿಸಲು ಒಪ್ಪಿದನು.
1948 ಸೆ.17ರಂದು ಹೈದ್ರಾಬಾದ್ ಕರ್ನಾಟಕ ಅಂದರೆ ಈಗಿನ ಕಲ್ಯಾಣ ಕರ್ನಾಟಕ ಭಾರತ ದೇಶದಲ್ಲಿ ವಿಲೀನಗೊಂಡಿತು ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಾವಿರಾರು ಜನರಿಗೆ ಸ್ವಚ್ಚ ಭಾರತ ಮಿಷನ್, ಮಹಾತ್ಮಗಾಂಧಿ ನರೇಗಾ, ಜೆಜೆಎಂ, ವಸತಿ, ಬೀದಿ ದೀಪಗಳು ಇತರೆ ಸೆವೆಗಳನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದರು.
ಭಾನಾಪುರ: ಗ್ರಾಮದ ಗ್ರಾಪಂನಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ಗ್ರಾಪಂ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಪವಿತ್ರ ಬಂಗಿ, ಪಿಡಿಒ ರಮೇಶ ತಿಮ್ಮರಡ್ಡಿ, ಗ್ರಾಪಂ ಸದಸ್ಯರಾದ ನೀಲಕಂಠಯ್ಯ ಸಸಿಮಠ, ರಾಮಣ್ಣ ಕೊಮಲಾಪುರ, ರೇಣುಕಾದೇವಿ ತಳವಾರ, ಸಿಬ್ಬಂದಿ ಅಲ್ಲಾಭಕ್ಷಿ ನದಾಫ್, ಶರಣಪ್ಪ ಬನ್ನಿಕೊಪ್ಪ ಇದ್ದರು.