

ಕುಕನೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜನಾಭಿವೃದ್ಧಿಗಾಗಿ ಐದು ಗ್ಯಾರಂಟಿಯ ಭಾಗ್ಯಗಳನ್ನು ನೀಡಿದೆ ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬುಧವಾರ ಮಾತನಾಡಿದರು.
ಬಿಜೆಪಿ ಅಂದರೆ ಲಂಚ ಹೊಡೆಯುವ ಭಾಗ್ಯ ನೀಡುವ ಪಕ್ಷವಾಗಿದ್ದು, ಬಿಜೆಪಿಯಲ್ಲಿ ಜನಾಭಿವೃದ್ಧಿ ಕಾರ್ಯ ಶೂನ್ಯ. ಸಮಾನತೆ ಎಂಬುವುದು ಕಾಂಗ್ರೆಸ್‌ನಲ್ಲಿ ಮಾತ್ರ ಉಳಿದಿದೆ. ಎಷ್ಟೋ ಜನ ರಾಜಕಾರಣಿಗಳು ಗೆಲ್ಲುವವರೆಗೂ ಒಂದುತರಹ ಇದ್ದರೆ, ಗೆದ್ದ ಮೇಲೆ ಎಷ್ಟೋ ಕಾರ್ಯಕರ್ತರನ್ನು ಮರೆತು ಬಿಡುತ್ತಾರೆ. ಆದರೆ ಕಾಂಗ್ರೆಸ್ ಮಾತ್ರ ಗೆದ್ದ ನಂತರ ಕಾರ್ಯಕರ್ತರಿಗೆ ಒಂದು ಅಭಿನಂದನೆಗಳನ್ನು ಹೇಳಿ ಮತ್ತು ಮುಂದಿನ ಅಭಿವೃದ್ಧಿಗೆ ಕಾರ್ಯಕರ್ತರ ಸಲಹೆ ಸೂಚನೆಗಳನ್ನು ಪಡೆದು ಅಭಿವೃದ್ಧಿ ಮಾಡುವ ಇಚ್ಚಾಸಕ್ತಿ ಹೊಂದಿದೆ. ಇಂದಿನ ಕಾಂಗ್ರೆಸ್ ಸರ್ಕಾರ ಮಾತ್ರ ಜನ ಮೆಚ್ಚುವ ಐದು ಭಾಗ್ಯಗಳನ್ನು ಜನರ ಅಭಿವೃದ್ಧಿಗೆ ನೀಡಿ ಶ್ರಮಿಸುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳು ಜನರಿಗೆ ಎಲ್ಲ ರಂಗದಲ್ಲೂ ಅನುಕೂಲವಾಗಿವೆ. ಕೃಷಿ ಚಟುವಟಿಕೆಗೆ ಸಹ ಅನುಕೂಲವಾಗಿದೆ. ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರಕ್ಕಾಗಿ ರೈತರು ಸಾಲ ಮಾಡುತ್ತಿದ್ದರು. ಗ್ಯಾರಂಟಿ ಯೋಜನೆಯಿಂದ ಬರುವ ಹಣದಲ್ಲಿ ರೈತ ವರ್ಗ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಯುವನಿಧಿಯ ಮೂಲಕ ಮಕ್ಕಳ ಶಿಕ್ಷಣವನ್ನು ಬೆಳಗಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದರು.
ಪ್ರಮುಖರಾದ ಕೆರಿಬಸಪ್ಪ ನಿಡಗುಂದಿ, ಮಲ್ಲಮ್ಮ ಗೊಂದಿ, ಸುಮಂಗಲಾ, ಹಾಲುಮತ ಮಹಾಸಭೆ ತಾಲೂಕು ಅಧ್ಯಕ್ಷ ಸಕ್ರಪ್ಪ ಚೌಡ್ಕಿ, ಎಪಿಎಂಸಿ ಮಾಜಿ ಅಧ್ಯಕ್ಷ ಈರಪ್ಪ ಹಳ್ಳಿಕೇರಿ ಇತರರಿದ್ದರು.