

ಕುಕನೂರು: ದೇಶ ಕಂಡ ಅಪ್ರತಿಮ ಸಮಾಜ ಸುಧಾರಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿಯನ್ನು ಎಲ್ಲ ಸಮುದಾಯಗಳ ಸಮನ್ವಯದೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಬೇಕಿದೆ ಎಂದು ತಾಪಂ ಇಒ ಸಂತೋಷ ಬಿರಾದಾರ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಏ.5 ರಂದು ಬಾಬು ಜಗಜೀವನ್ ರಾಮ್ ಹಾಗೂ ಏ.14 ರಂದು ಅಂಬೇಡ್ಕರ್ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುವುದು. ಎರಡೂ ದಿನಾಚರಣೆಗಳನ್ನು ಅದ್ದೂರಿಯಾಗಿ ಏ.19ಕ್ಕೆ ಆಯೋಜಿಸಲಾಗುವುದು. ಆದರೆ, ಎಲ್ಲ ಸಮುದಾಯಗಳ ಮುಖಂಡರು ಮತ್ತು ಸಂಘಟನೆಗಳ ಕಾರ್ಯಕರ್ತರನ್ನು ಒಳಗೊಂಡು ಜಯಂತಿಯನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ಮಾತನಾಡಿದರು.
ಜಯಂತಿ ಕಾರ್ಯಕ್ರಮಗಳಿಗೆ ಮಾತ್ರ ನಮ್ಮನ್ನು ಅಹ್ವಾನಿಸಲಾಗುತ್ತಿದೆ. ಆದರೆ ಸಮುದಾಯದ ಕುಂದುಕೊರತೆ ಸಭೆಗೆ ಆಹ್ವಾನಿಸಬೇಕು ಎಂದು ಮುಖಂಡರಾದ ಮಹೇಶ್ ದೊಡ್ಡಮನಿ, ಲಕ್ಷ್ಮಣ್ ಕಾಳಿ ಅಧಿಕಾರಿಗಳನ್ನು ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಧರ್ ಸಕ್ರಿ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಶಿವಶಂಕರ್ ಕರಡ್ಕಲ್, ಪ್ರಮುಖರಾದ ಯಮನೂರಪ್ಪ ಗುರ್ಲೆಕೊಪ್ಪ, ನಿಂಗಪ್ಪ ಗುರ್ಲೆಕೊಪ್ಪ ಇತರರಿದ್ದರು.