

ಸುಬ್ರಹ್ಮಣ್ಯ: ಸಮಾಜಮುಖಿ ಸೇವೆ ನೆರವೇರಿಸುತ್ತಿರುವ 20ರಿಂದ 23 ವರ್ಷ ವಯಸ್ಸಿನ ಯುವಕರನ್ನು ಒಳಗೊಂಡ ಸುಬ್ರಹ್ಮಣ್ಯದ ಕುಕ್ಕೆಶ್ರೀ ಸರ್ಕಲ್ ತಂಡವು ಶಾರ್ದೂಲ ವೇಷ ಧರಿಸಿ ಸಂಗ್ರಹಿತ 36,961 ರೂ.ಅನ್ನು ಭಾನುವಾರ ಕೈಕಂಬದ ತಿರುಮಲೇಶ್ವರಿ ಅವರಿಗೆ ಹಸ್ತಾಂತರಿಸಿತು.
ತಂಡದ ಸದಸ್ಯರಾದ ಸುಹಾಸ್ ಎಚ್.ಎಸ್., ಅಕ್ಷಯ್ ಕೆ.ಎಸ್.ನೂಚಿಲ, ಗಗನ್ ರಾಜ್, ವಿಷ್ಣು, ಚೆನ್ನ, ಉದಯ ಕುಮಾರ್ ದೋಣಿಮಕ್ಕಿ, ಹಿತೇಶ್, ಸೃಜನ್, ಕಾರ್ತಿಕ್ ಎನ್., ಸುದರ್ಶನ್, ಕಾರ್ತಿಕ್, ರಾಜೇಶ್, ಅನ್ವಿತ್, ಯಕ್ಷಿತ್, ಭರತೇಶ್, ರಕ್ಷಣ್, ಮುಖೇಶ್, ಅಶ್ವತ್ಥ್, ಹರಿಚಂದನ್, ಅನಿರುದ್ಧ ಮೊದಲಾದವರಿದ್ದರು.
ಜಾಲತಾಣದಲ್ಲಿ ವಿವರ:
ನವರಾತ್ರಿಯ ಎರಡು ದಿನ ವೇಷಧಾರಣೆ ಮಾಡಿ ಸುಬ್ರಹ್ಮಣ್ಯದ ಮನೆ ಮನೆಗೆ ತೆರಳಿ ಸಂಗ್ರಹವಾದ ಒಟ್ಟು ಮೊತ್ತ 36,961 ರೂ. ಅನ್ನು ತಿರುಮಲೇಶ್ವರಿ ಅವರಿಗೆ ನೀಡಿದರು. ಸಂಗ್ರಹಿತವಾದ ಮೊತ್ತದ ಅಷ್ಟೂ ವಿವರವನ್ನು ಸಾಮಾಜಿಕ ಜಾಲತಾಣದ ಮೂಲಕ ಜನತೆ ಮುಂದಿರಿಸಿದರು. ಪೆಟ್ಟಿಗೆಯಲ್ಲಿ ಸಂಗ್ರಹವಾದ ಮೊತ್ತ 34,310 ರೂ., ಗೂಗಲ್ ಪೇನಲ್ಲಿ ಸಂಗ್ರಹಿತ ಮೊತ್ತ 3,601 ರೂ., ಇದರಲ್ಲಿ ಸಿಂಹ ವೇಷಕ್ಕೆ ಖರ್ಚು 950 ರೂ., ಒಟ್ಟು ಉಳಿಕೆ 36,961 ರೂ. ಎಂಬ ವಿವರವನ್ನು ಪಾರದರ್ಶಕವಾಗಿ ನೀಡಿದ್ದಾರೆ.