

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ದ.ಕ. ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ. ಮತ್ತು ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್. ವಿರುದ್ಧ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ನಿರ್ದೇಶಕ ಶ್ರೀನಾಥ್ ಟಿ.ಎಸ್. ದ.ಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ.
ದೇವಸ್ಥಾನದ ಅಧಿಕೃತ ದಾಖಲಾತಿ ಪುಸ್ತಕದಲ್ಲಿ ದಾಖಲಾಗಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಜ್ರದ ಕಂಠಿಹಾರ, ಆಭರಣ, ಶ್ರೀ ಸತ್ಯನಾರಾಯಣ ದೇವರ ಫೋಟೋ, ಶ್ರೀ ಕುಕ್ಕೆ ಲಿಂಗ ದೇವಳದ ಬಳಿ ಇದ್ದ ಬೆಳ್ಳಿಯ ಒಡವೆ, ಪುರಾತನ ಕಾಲದ ವಿಗ್ರಹಗಳು ನಾಪತ್ತೆಯಾಗಿವೆ. ಈ ಬಗ್ಗೆ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮೋನಪ್ಪ ಮಾನಾಡು 2019ರ ನ.22ರಂದು ಮಾಹಿತಿ ಕೇಳಿದರೂ ನೀಡಿಲ್ಲ. ನಾನು ಆರ್‌ಟಿಐ ಅರ್ಜಿ ಸಲ್ಲಿಸಿದರೂ ಮಾಹಿತಿ ನೀಡಿಲ್ಲ. ಅವ್ಯವಹಾರ ನಡೆದಿರುವ ಸಾಧ್ಯತೆಯಿದೆ. ಸೂಕ್ತ ತನಿಖೆ ನಡೆಸುವಂತೆ ದೂರಿನಲ್ಲಿ ತಿಳಿಸಲಾಗಿದೆ.
ದ್ವೇಷದಿಂದ ಸುಳ್ಳು ಆರೋಪ
ದೂರುದಾರರು ದೇವಸ್ಥಾನದಲ್ಲಿ ಈ ಹಿಂದೆ ಕ್ರಿಯಾಕರ್ತರಾಗಿದ್ದು, ಕಾನೂನುಬಾಹಿರ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಆಯುಕ್ತರು ನಡೆಸಿದ ತನಿಖೆಯಾಧಾರದಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು. ಇದಕ್ಕಾಗಿ ಈ ರೀತಿ ಸುಳ್ಳು ದೂರು ನೀಡಿ ಆರೋಪಿಸುತ್ತಿದ್ದಾರೆ ಎಂದು ಆಡಳಿತಾಧಿಕಾರಿ ರೂಪಾ ತಿಳಿಸಿದ್ದಾರೆ.
ದೂರುದಾರ ಶ್ರೀನಾಥ್ ಹೆಸರಿಸಿರುವ ಎಲ್ಲ ವಸ್ತುಗಳು ದೇವಳದಲ್ಲಿದೆ. ಅವರು ಕೇಳಿರುವ ಮಾಹಿತಿಯನ್ನು ಅ.19ರಂದು ರವಾನಿಸಲಾಗಿದೆ ಎಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ. ಶ್ರೀನಾಥ್ ವೈಯಕ್ತಿಕ ದ್ವೇಷದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕ್ಷೇತ್ರದಿಂದ ಸರ್ಪಸಂಸ್ಕಾರ ಸೇವಾ ಕ್ರಿಯಾಕರ್ತರಾಗಿ ನಿಯೋಜಿಸಲ್ಪಟ್ಟಿದ್ದ ಶ್ರೀನಾಥ್ ಭಕ್ತರಾದ ಸಂಜೀವ ಪೂಜಾರಿ ಎಂಬುವರಿಂದ 800 ರೂ. ದಕ್ಷಿಣೆಗಾಗಿ ಸತಾಯಿಸಿರುವ ದೂರು ಬಂದಿತ್ತು. ತನಿಖೆಯಲ್ಲಿ 600 ರೂ. ದಕ್ಷಿಣೆ ಕೇಳಿ ಪಡೆದಿರುವುದಾಗಿ ಶ್ರೀನಾಥ್ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸೆ.29ರಂದು ಸರ್ಪಸಂಸ್ಕಾರ ಸೇವೆಯ ಕ್ರಿಯಾಕರ್ತೃತ್ವಕ್ಕೆ ನಿಯೋಜಿಸಿರುವುದನ್ನು ರದ್ದು ಮಾಡಲಾಗಿತ್ತು ಎಂದು ದೇವಳ ತಿಳಿಸಿದೆ.