ಕುಕ್ಕೆ ಪ್ರಾಧಿಕಾರಕ್ಕೆ ಸರ್ಕಾರದ ಒಲವು

kukke
Published on

ಪಿ.ಬಿ. ಹರೀಶ್ ರೈ ಮಂಗಳೂರು

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಪ್ರಾಧಿಕಾರ ರಚಿಸಲು ಚಿಂತನೆ ನಡೆಸಿದೆ. ರಾಜ್ಯದ ದೇವಾಲಯಗಳ ಪೈಕಿ ಆದಾಯದಲ್ಲಿ ನಂ.1 ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯಿಂದ ಬೇರ್ಪಡುವ ಸಾಧ್ಯತೆ ಇದೆ.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿದ್ದ ಚಾಮರಾಜನಗರ ಜಿಲ್ಲೆಯ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ 2013ರಲ್ಲಿ ಪ್ರತ್ಯೇಕ ಪ್ರಾಧಿಕಾರ ರಚನೆಯಾಗಿದೆ. ಇದೇ ಮಾದರಿಯಲ್ಲಿ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ದಿಗೆ ಪ್ರಾಧಿಕಾರ ರಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ.

ಗರಿಷ್ಠ ಆದಾಯ: ವಾರ್ಷಿಕ 100 ಕೋಟಿ ರೂ. ಅಧಿಕ ಆದಾಯ ಇರುವ ಸುಬ್ರಹ್ಮಣ್ಯ ದೇವಸ್ಥಾನ ಗರಿಷ್ಠ ಆದಾಯದ ಕ್ಷೇತ್ರವಾಗಿದೆ. ಆದರೆ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಾರ್ಯ ನಡೆದಿರಲಿಲ್ಲ. ಈ ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗ ಮಾಸ್ಟರ್ ಪ್ಲಾನ್ ಯೋಜನೆಯಡಿ 180 ಕೋಟಿ ರೂ. ಅನುದಾನ ಘೋಷಣೆಯಾಗಿತ್ತು. ಈ ಯೋಜನೆಯ ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಈಗ ಪ್ರಗತಿಯಲ್ಲಿದೆ.

ಅಭಿವೃದ್ಧಿಗೆ ಪೂರಕ: ಪ್ರಸ್ತುತ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ನಿರ್ವಹಣೆಗೆ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ಮಂಡಳಿ ಸದಸ್ಯರ ವ್ಯವಸ್ಥೆ ಇದೆ. ಈ ವ್ಯವಸ್ಥೆಯಡಿ ಸೀಮಿತ ಅಭಿವೃದ್ಧಿ ಮಾತ್ರ ಸಾಧ್ಯ. ಬೃಹತ್ ಕಾಮಗಾರಿ ಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ಪಡೆಯಬೇಕಾಗುತ್ತದೆ. ಬಹುತೇಕ ಸಂದರ್ಭ ಮಂಜೂರಾತಿ ಪಡೆಯುವಾಗಲೇ ವರ್ಷ ಕಳೆಯುತ್ತದೆ. ಪ್ರಾಧಿಕಾರ ಸ್ವಾಯತ್ತ ಸಂಸ್ಥೆಯಾದ ಕಾರಣ ಎಲ್ಲವೂ ಪ್ರಾಧಿಕಾರದ ಮಟ್ಟದಲ್ಲೇ ನಿರ್ಣಯಗೊಂಡು ಮಂಜೂರಾತಿ ಪಡೆಯುತ್ತದೆ. ಇದರಿಂದ ತ್ವರಿತ ಅಭಿವೃದ್ಧಿ ಸಾಧ್ಯವಾಗಲಿದೆ.

ಸಿಎಂ ಅಧ್ಯಕ್ಷರು: ಪ್ರಾಧಿಕಾರಕ್ಕೆ ಮುಖ್ಯಮಂತ್ರಿಯೇ ಅಧ್ಯಕ್ಷರಾಗಿರುತ್ತಾರೆ. ಸಚಿವರು ಉಪಾಧ್ಯಕ್ಷರು, ಕೆಎಎಸ್ ದರ್ಜೆ ಅಧಿಕಾರಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಇಲಾಖೆಯ ಆಯಕ್ತರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಜಿಪಂ ಸಿಇಒ ಮುಂತಾದವರು ಸದಸ್ಯರಾಗಿರುತ್ತಾರೆ. ಸರ್ಕಾರದಿಂದ ಐದು ಮಂದಿ ಸದಸ್ಯರು ಪ್ರಾಧಿಕಾರಕ್ಕೆ ನೇಮಕವಾಗಲಿದ್ದಾರೆ.

ವ್ಯವಸ್ಥಾಪನಾ ಸಮಿತಿ ನೇಮಕ ಮುಂದಕ್ಕೆ?

ಕಾಂಗ್ರೆಸ್ ಆಡಳಿತದಲ್ಲಿ ನೇಮಕವಾದ ವ್ಯವಸ್ಥಾಪನಾ ಸಮಿತಿ ಸದಸ್ಯರ ಅವಧಿ 2019ರ ಅಕ್ಟೋಬರ್‌ಗೆ ಪೂರ್ಣಗೊಂಡಿತ್ತು. ಬಿಜೆಪಿ ಸರ್ಕಾರ ಹೊಸ ಸಮಿತಿ ರಚನೆಗೆ ಅರ್ಜಿ ಆಹ್ವಾನಿಸಿದ್ದು, 80ಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 8 ಮಂದಿಯ ಹೆಸರನ್ನು ಧಾರ್ಮಿಕ ಪರಿಷತ್ ಅಂತಿಮಗೊಳಿಸಿತ್ತು ಎನ್ನಲಾಗಿದೆ. ಸದ್ಯ ಪ್ರಾಧಿಕಾರ ರಚನೆ ಪ್ರಸ್ತಾವನೆ ಇರುವ ಕಾರಣ ವ್ಯವಸ್ಥಾಪನಾ ಸಮಿತಿಗೆ ನೇಮಕ ಪ್ರಕ್ರಿಯೆ ಮುಂದೂಡಲು ಧಾರ್ಮಿಕ ಪರಿಷತ್ ನಿರ್ಧರಿಸಿದೆ ಎನ್ನುವ ಮಾಹಿತಿ ಇದೆ.

ಕ್ಷೇತ್ರದ ಅಭಿವೃದ್ಧಿಗೆ ವ್ಯವಸ್ಥಾಪನಾ ಸಮಿತಿ ಹಾಗೂ ಪ್ರಾಧಿಕಾರದ ಪೈಕಿ ಯಾವುದು ಹೆಚ್ಚು ಸೂಕ್ತ ಎನ್ನುವ ಬಗ್ಗೆ ಚಿಂತನೆ ನಡೆಸಲಾಗುವುದು. ಪ್ರಾಧಿಕಾರದಿಂದ ಅಭಿವೃದ್ಧಿಗೆ ಹೆಚ್ಚು ಅನುಕೂಲ ಎನ್ನುವ ಅಭಿಪ್ರಾಯ ಮೂಡಿದರೆ ಪ್ರಾಧಿಕಾರ ರಚನೆಯಾಗಲಿದೆ.

- ಕೋಟ ಶ್ರೀನಿವಾಸ ಪೂಜಾರಿ, ಸಚಿವರು, ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net