

ಮಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನ್ನದಾನ ನಿಧಿಗೆ ತೆಲಂಗಾಣ ಸರ್ಕಾರದ ಕಂದಾಯ ಸಚಿವ ಪೊಂಗಲೇಟ್ ಶ್ರೀನಿವಾಸ ರೆಡ್ಡಿ ಹರಕೆ ರೂಪದಲ್ಲಿ 1 ಕೋಟಿ ರೂ. ದೇಣಿಗೆಯನ್ನು ದೇವಳಕ್ಕೆ ಮಂಗಳವಾರ ಹಸ್ತಾಂತರಿಸಿದರು.
ಮಗಳ ಮದುವೆಗಾಗಿ ಸಚಿವರು ಮಾಡಿದ ಪ್ರಾರ್ಥನೆಗೆ ಮೂರು ತಿಂಗಳ ಒಳಗೆ ಕುಕ್ಕೆ ಸುಬ್ರಹ್ಮಣ್ಯ ದೇವರು ವರ ನೀಡಿದ ಕಾರಣ ತಾನು ಹೇಳಿಕೊಂಡ ಹರಕೆಯಂತೆ ಒಂದು ಕೋಟಿ ಹಣವನ್ನು ನೀಡಿ ಹರಕೆ ಸೇವೆಯನ್ನು ಮಂಗಳವಾರ ಪೂರೈಸಿದರು.
ಶ್ರೀನಿವಾಸ ರೆಡ್ಡಿ ಅವರು ಕಳೆದ ವರ್ಷ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿ ದೇವರ ಮುಂಭಾಗದಲ್ಲಿ ಮಗಳ ಮದುವೆಯು ಉತ್ತಮ ವರನೊಂದಿಗೆ ನೆರವೇರಬೇಕು ಎಂದು ಪ್ರಾರ್ಥಿಸಿದ್ದರು. ನನ್ನ ಪ್ರಾರ್ಥನೆ ಈಡೇರಿದರೆ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುವ ಅನ್ನದಾನಕ್ಕೆ ದೇಣಿಗೆ ನೀಡುವುದಾಗಿ ಹರಕೆ ಹೊತ್ತಿದ್ದರು. ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿದ 3 ತಿಂಗಳ ನಂತರ ಅಮೆರಿಕದಲಿರುವ ಭಾರತೀಯ ಮೂಲದ ಯುವಕನೊಂದಿಗೆ ಮಗಳ ಮದುವೆ ನಡೆದಿದೆ.
ಮಂಗಳವಾರ ದೇವಳಕ್ಕೆ ಕುಟುಂಬ ಸಮೇತ ಆಗಮಿಸಿದ ಸಚಿವರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ ಸುಳ್ಳಿ ಮತ್ತು ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ 1 ಕೋಟಿ ರೂ. ಚೆಕ್ ಅನ್ನು ಮಗಳು ಮತ್ತು ಅಳಿಯನ ಮೂಲಕ ಹಸ್ತಾಂತ ರಿಸಿದರು.