

ಸುಬ್ರಹ್ಮಣ್ಯ: ಲಾಕ್‌ಡೌನ್ ಏ.21ರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಆಗಮನ ನಿರ್ಬಂಧಿಸಲಾಗಿತ್ತು. ಆದರೆ ಇದೀಗ ಕೋವಿಡ್-19 ಇಳಿಮುಖಗೊಂಡಿರುವುದರಿಂದ ಸರ್ಕಾರದ ಮಾರ್ಗಸೂಚಿ ಪ್ರಕಾರ ದೇವಳಕ್ಕೆ ಭಕ್ತರ ಪ್ರವೇಶಕ್ಕೆ ಸೋಮವಾರದಿಂದ ಅವಕಾಶ ಲಭ್ಯವಾಗಿದೆ.
ಕ್ಷೇತ್ರದಲ್ಲಿ ಶ್ರೀ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಯಾವುದೇ ಸೇವೆಗಳು ಸರ್ಕಾರದ ಮುಂದಿನ ಆದೇಶದ ತನಕ ನಡೆಯುವುದಿಲ್ಲ. ಮಂಗಳಾರತಿ ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.
ಎಲ್ಲ ಭಕ್ತರಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 11.30ರ ತನಕ, ಮಧ್ಯಾಹ್ನ 12.15-1.30ರ ತನಕ ದರ್ಶನಕ್ಕೆ ಅವಕಾಶವಿದೆ. ಅನಂತರ 2.30ರಿಂದ ಸಾಯಂಕಾಲ 6.30ರ ತನಕ ಭಕ್ತರು ದೇವರ ದರ್ಶನ ಪಡೆಯಬಹುದು. ಮಂಗಳಾರತಿ ಸೇವೆಗೆ ಅವಕಾಶ ನೀಡಲಾಗಿದೆ. ಈ ಸೇವೆಗೆ ಮಾತ್ರ ಅವಕಾಶವಿರುವುದರಿಂದ ಪ್ರತಿ 15 ನಿಮಿಷಕ್ಕೊಮ್ಮೆ ದೇವರಿಗೆ ಮಂಗಳಾರತಿ ನಡೆಯಲಿದೆ. ಮಂಗಳಾರತಿಗೆ ಯಾವುದೇ ಪ್ರಸಾದ ನೀಡಲಾಗುವುದಿಲ್ಲ. ದೇವಳದ ವಸತಿಗೃಹದಲ್ಲಿ ತಂಗಲು ಅವಕಾಶವಿಲ್ಲ. ಗಂಧ ಪ್ರಸಾದ, ತೀರ್ಥ ಪ್ರಸಾದ, ಮೂಲಮೃತ್ತಿಕೆ ಪ್ರಸಾದ ನೀಡಲಾಗುವುದಿಲ್ಲ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
ಭೋಜನ ಪ್ರಸಾದದ ವ್ಯವಸ್ಥೆಯೂ ಇರುವುದಿಲ್ಲ. ಪಂಚಕಜ್ಜಾಯ, ಲಡ್ಡುಪ್ರಸಾದ ವಿತರಣೆಯಾಗುವುದಿಲ್ಲ. ದೇವಳದ ಮುಂಭಾಗ ಕಡ್ಡಾಯವಾಗಿ ಥರ್ಮಾಮೀಟರ್‌ನಿಂದ ತಪಾಸಣೆ ಮಾಡಲಾಗುವುದು. ಅಲ್ಲದೆ ಒಳಪ್ರವೇಶಿಸುವಾಗ ಸ್ಯಾನಿಟೈಸರ್ ನೀಡಲಾಗುವುದು. ಜ್ವರ, ಕೆಮ್ಮು, ಶೀತವಿರುವ ಭಕ್ತರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಅಅಂತರ ಪಾಲನೆ ಮಾಡಬೇಕು ಎಂದು ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.
ಅಂತರ ಕಾಯ್ದುಕೊಳ್ಳಲು ಚೌಕ: ದೇವಳಕ್ಕೆ ರಾಜಗೋಪುರದ ಪ್ರಧಾನ ದ್ವಾರದ ಮೂಲಕ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ. ಉಳಿದ ದ್ವಾರದಲ್ಲಿ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಹೊರಬರಲು ಮತ್ತೊಂದು ದ್ವಾರವನ್ನು ಬಳಸಿಕೊಳ್ಳಲಾಗುವುದು. ಪ್ರಧಾನ ದ್ವಾರದ ಬಳಿಕ ಹೊರಾಂಗಣ ಮತ್ತು ಒಳಾಂಗಣಕ್ಕೆ ಪ್ರವೇಶಿಸುವಾಗ ಅಂತರ ಕಾಯ್ದುಕೊಳ್ಳಲು ಚೌಕವನ್ನು ಬರೆಯಲಾಗಿದೆ. ದೇವಳದ ಹೊರಾಂಗಣ, ಒಳಾಂಗಣ ಸೇರಿದಂತೆ ದೇವಳದ ಸುತ್ತಲೂ ಚೌಕ ಬರೆಯಲಾಗಿದೆ. ಭಕ್ತರು ಈ ಚೌಕದ ಮೂಲಕ ಸರದಿ ಸಾಲಿನಲ್ಲಿ ಮುಂದಡಿಯಿಡಬೇಕು. ದೇವಳದ ಪ್ರವೇಶದಿಂದ ಹೊರಬರುವ ತನಕವೂ ಭಕ್ತರು ಚೌಕದಲ್ಲಿ ಮುನ್ನಡೆಯಬೇಕು. ಈ ಮೂಲಕ ಭಕ್ತರು ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದಿ ಸುಬ್ರಹ್ಮಣ್ಯ ದೇವಸ್ಥಾನ ಪ್ರವೇಶಿಸುವಾಗಲೂ ಇದೇ ಕ್ರಮ ಅನುಸರಿಸಲಾಗುತ್ತದೆ. ಕೋವಿಡ್ 19 ಮಾರ್ಗಸೂಚಿಗಳಿಗೆ ಅನುಗುಣವಾಗಿ ಭಕ್ತರು ದೇವರ ದರ್ಶನ ಪಡೆಯಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಸಹಕರಿಸಬೇಕು ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದರು.