ಒಂಟಿ ಸಲಗ ಕುಕ್ಕೆ ಪೇಟೆ ಸವಾರಿ

aane new
Published on

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಗುರುವಾರ ಮುಂಜಾನೆ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ.

ಗುರುವಾರ ಮುಂಜಾನೆ 5 ಗಂಟೆಗೆ ಸುಬ್ರಹ್ಮಣ್ಯದ ಬಂಡಿವಾಳದ ಮುಂಭಾಗದಿಂದ ಬಂದು ಬೈಪಾಸ್ ರಸ್ತೆಯಲ್ಲಿ ಮುನ್ನಡೆದಾಗ ಪ್ರಾಥಮಿಕ ಶಾಲೆ ಬಳಿ ನಾಯಿಯೊಂದು ಉಪಟಳ ನೀಡಿದ್ದರಿಂದ ತಿರುಗಿ ಅದನ್ನು ಹೆದರಿಸಿದೆ. ಬಳಿಕ ಮುಖ್ಯ ರಸ್ತೆಯತ್ತ ಧಾವಿಸಿದಾಗ ವಾಹನಗಳು ಹಾದು ಹೋಗುವುದನ್ನು ಕಂಡು ಕ್ಷಣಕಾಲ ನಿಂತು ವಾಹನಗಳು ತೆರಳಿದ ಪ್ರಧಾನ ರಸ್ತೆಯಲ್ಲಿ ಪ್ರಯಾಣ ಮುಂದುವರಿಸಿತು. ಈ ವಿಡಿಯೋ ಮಯೂರ ರೆಸಿಡೆನ್ಸಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಕಾಶಿಕಟ್ಟೆ ಮೂಲಕ ನೂಚಿಲ ಮಾರ್ಗದಲ್ಲಿ ಕಾಡಿನತ್ತ ಪಯಣ ಬೆಳೆಸಿದೆ. ಇದರ ನಡುವೆ ಮನೆಯೊಂದರ ತಡೆಗೋಡೆಯನ್ನು ಧ್ವಂಸಗೊಳಿಸಿ ಹಾದಿ ಮಾಡಿ ಕಾಡಿನತ್ತ ಹೆಜ್ಜೆ ಹಾಕಿದೆ.

ಇದು ಮೂರನೇ ಬಾರಿ

ಒಂಟಿ ಸಲಗ ಸುಬ್ರಹ್ಮಣ್ಯ ಪೇಟೆಯ ಮುಖ್ಯರಸ್ತೆಯಲ್ಲಿ ಹಾದು ಹೋಗುವುದು ಮೊದಲಲ್ಲ. ಮೂರು ವರ್ಷದಿಂದ ಈ ಒಂಟಿ ಸಲಗ ಇದೇ ಸಮಯದಲ್ಲಿ ಅಡ್ಡಾಡಿದೆ. ಗುರುವಾರ ಮುಂಜಾನೆ ದೇವಳದ ಆನೆಯ ಶೆಡ್‌ನ ಮೇಲ್ಭಾಗದ ತಿರುವಿನ ಕಾಡಿನಿಂದ ಇಳಿದು ನಗರದತ್ತ ಪಯಣ ಬೆಳೆಸಿದೆ. ಇಂಜಾಡಿ ಕಾಡಿನಿಂದ ರಸ್ತೆಯಲ್ಲಿ ಸಾಗಿ ನೂಚಿಲ ಕಾಡಿಗೆ ತೆರಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net