

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವಕ್ಕೆ ಬರುವ ಭಕ್ತರನ್ನು ವಿಶೇಷವಾದ ವಿದ್ಯುತ್ ಪರಿಕರಗಳಿಂದ ಮಾಡಿದ ಆಕರ್ಷಕ ದೀಪಾಲಂಕೃತ ದ್ವಾರ ಸ್ವಾಗತಿಸಲಿದೆ. ಕ್ಷೇತ್ರ ಮಾತ್ರವಲ್ಲದೆ ಇತರ ಕಡೆಗಳಲ್ಲಿ ಸ್ವಾಗತ ಕಮಾನು ಸಿದ್ಧಗೊಳ್ಳುತ್ತಿದೆ. ಇದರೊಂದಿಗೆ ದೀಪಾಲಂಕೃತ ಕೊಡೆಗಳು, ಪ್ರಭಾವಳಿಗಳು ಜಾತ್ರೆಯ ಮೆರುಗು ಹೆಚ್ಚಿಸಲಿವೆ.
ಸ್ವಾಗತ ಕಮಾನುಗಳು: ಜಾತ್ರೋತ್ಸವಕ್ಕೆ ಭಕ್ತರನ್ನು ಸ್ವಾಗತಿಸಲು ವಿಶೇಷ ಸ್ವಾಗತ ಕಮಾನು ಸಿದ್ಧಗೊಂಡಿವೆ. ಗುಂಡ್ಯದಲ್ಲಿ ಭಕ್ತರಾದ ಸಂತೋಷ್ ಗುಂಡ್ಯ, ಪಂಜದಲ್ಲಿ ಮಹೇಶ್ ಕುಮಾರ್ ಕರಿಕ್ಕಳ, ಡಾ.ದೇವಿಪ್ರಸಾದ್ ಕಾನತ್ತೂರು, ರಜತ್ ಭಟ್ ಪಂಜದ ಬೈಲು ಅವರ ಸೇವೆಯಲ್ಲಿ ಸ್ವಾಗತ ಕಮಾನು ಸಿದ್ಧಗೊಂಡಿದೆ. ಇದಲ್ಲದೆ ಕಡಬ, ಗುತ್ತಿಗಾರು, ಪೈಚಾರು, ದರ್ಬೆಯಲ್ಲಿ ಸ್ವಾಗತ ಕಮಾನು ನಿರ್ಮಿಸಲು ಯೋಚಿಸಲಾಗಿದೆ.
ಅಧಿಕಾರಿಗಳ ಆಸಕ್ತಿ: ಚಂಪಾಷಷ್ಠಿ ಜಾತ್ರೆ ನಾಡಹಬ್ಬವಾಗಿ ವಿಜೃಂಭಣೆಯಿಂದ ನಡೆಯಬೇಕು. ಆಗಮಿಸುವ ಭಕ್ತರಿಗೆ ಕ್ಷೇತ್ರದಲ್ಲಿ ವಿದ್ಯುದ್ದೀಪ, ಹಸಿರು ಪಟಾಕಿ, ಭೋಜನ ಪ್ರಸಾದ ವ್ಯವಸ್ಥೆ ಎಲ್ಲವೂ ಪ್ರಿಯವಾಗಬೇಕು ಎಂಬ ನಿಟ್ಟಿನಲ್ಲಿ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ ಜಾತ್ರೋತ್ಸವವನ್ನು ಆಕರ್ಷಣೀಯಗೊಳಿಸಲು ಪ್ರಯತ್ನಿಸಿದ್ದಾರೆ. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮತ್ತಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ನೂತನ ವ್ಯವಸ್ಥೆಗಳನ್ನು ಎಇಒ ಯೇಸುರಾಜು, ದೇವಳದ ಅಭಿಯಂತ ಉದಯ ಕುಮಾರ್‌ಮಾಡುತ್ತಿದ್ದಾರೆ.
ಕುಮಾರಧಾರಾದಲ್ಲಿ ನಿರ್ಮಾಣ
ಶ್ರೀ ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿದ್ಯುದ್ದೀಪಾಲಂಕಾರ ಇದೆ. ಈ ಬಾರಿ ವಿಶೇಷವಾಗಿ ವಿದ್ಯುತ್ ಪರಿಕರಗಳಿಂದಲೇ ರಚಿತವಾದ ವಿದ್ಯುದ್ದೀಪಾಲಂಕೃತ ದ್ವಾರವು ಕುಮಾರಧಾರಾದ ಆರ್‌ಎನ್‌ಎಸ್ ಬಳಿ ನಿರ್ಮಾಣವಾಗಲಿದೆ. ಈ ದ್ವಾರ ಆಕರ್ಷಣೆಯೊಂದಿಗೆ ಭಕ್ತರನ್ನು ಸ್ವಾಗತಿಸಲಿದೆ. ಅಲ್ಲದೆ ಅದರ ಇಕ್ಕೆಲದಲ್ಲಿ ದೀಪಾಲಂಕೃತ ಕೊಡೆಗಳು ಅಳವಡಿಸಲ್ಪಡಲಿವೆ.
ಪುಷ್ಪ ದ್ವಾರ
ಆದಿದೇವಳ, ಆದಿಶೇಷ ವಸತಿ ಗೃಹಕ್ಕೆ ತೆರಳುವ ರಸ್ತೆಯಲ್ಲಿ ಪುಷ್ಪಾಲಂಕೃತ ಹೂವಿನ ದ್ವಾರ ನಿರ್ಮಾಣಗೊಳ್ಳಲಿದೆ. ಸಂಪೂರ್ಣ ಹೂವಿನಿಂದ ಈ ಸ್ವಾಗತ ಗೋಪುರ ನಿರ್ಮಾಣವಾಗಲಿದೆ. ಕುಮಾರಧಾರ ಸೇತುವೆ ಬಳಿ ಕುಕ್ಕೆಶ್ರೀ ಅಟೋ ಚಾಲಕ-ಮಾಲೀಕ ಸಂಘದಿಂದ ದ್ವಾರ, ಸುಳ್ಯ ರಸ್ತೆಯ ದರ್ಪಣ ತೀರ್ಥ ಸೇತುವೆ ಬಳಿಕ ಕುಮಾರಸ್ವಾಮಿ ವಿದ್ಯಾಲಯದಿಂದ ಸ್ವಾಗತ ಕಮಾನು ನಿರ್ಮಾಣಗೊಳ್ಳಲಿದೆ. ಕಾಶಿಕಟ್ಟೆಯಿಂದ ಆದಿಸುಬ್ರಹ್ಮಣ್ಯಕ್ಕೆ ತೆರಳುವ ರಸ್ತೆಯಲ್ಲಿ ಕಾಶಿಕಟ್ಟೆ ದ್ವಾರ, ಬಸ್‌ನಿಲ್ದಾಣ ಸಮೀಪದಿಂದ ಆದಿಗೆ ತೆರಳುವ ರಸ್ತೆಯಲ್ಲಿ ಆದಿಸುಬ್ರಹ್ಮಣ್ಯ ದ್ವಾರ ನಿರ್ಮಾಣಗೊಳ್ಳಲಿದೆ.
ಚಂಪಾಷಷ್ಠಿ ಜಾತ್ರೋತ್ಸವಕ್ಕೆ ರಾಜ್ಯ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿರುವವರು ಆಗಮಿಸುತ್ತಾರೆ.ಭಕ್ತರಿಗೆ ಸೂಕ್ತ ಅನುಕೂಲ ಜತೆಗೆ ವಿಶೇಷ ಆಕರ್ಷಣೆ ಒದಗಿಸಲು ಚಿಂತನೆ ಮಾಡಲಾಗಿದೆ. ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲು ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯನ ಕೃಪಾಶೀರ್ವಾದದಿಂದ ಉತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಲಿದೆ. ಜುಬಿನ್ ಮೊಹಾಪಾತ್ರ, ಆಡಳಿತಾಧಿಕಾರಿ. ಜಾತ್ರೋತ್ಸವಕ್ಕೆ ವಿಶೇಷವಾದ ವಿದ್ಯುದ್ದೀಪಾಲಂಕೃತ ದ್ವಾರವನ್ನು ರಚನೆ ಮಾಡಲಾಗುವುದು. ಕ್ಷೇತ್ರದಾದ್ಯಂತ ಸ್ವಾಗತ ಕಮಾನು ನಿರ್ಮಾಣ ಮಾಡಲಾಗುವುದು. ಈ ದ್ವಾರಗಳ ಮೂಲಕ ಭಕ್ತರಿಗೆ ಕ್ಷೇತ್ರದ ಆಯಾಯ ಸ್ಥಳಗಳಿಗೆ ತೆರಳಲು ಅನುಕೂಲವಾಗುತ್ತದೆ. ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ. https://www.vijayavani.net/a-fishing-boat-sank https://www.vijayavani.net/spiritual-camp-from-6