ಜಾತ್ರೆಗೆ ಅತಿಥಿಗಳಾಗಿ ಬರುವ ಮತ್ಸ್ಯಗಳು : ದೇವರ ಜಳಕ ಗುಂಡಿ ತುಂಬ ಮೀನುಗಳು

New Project (3)
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳ ಚಂಪಾಷಷ್ಠಿ ಜಾತ್ರೋತ್ಸವದ ಸಂದರ್ಭ ಪವಿತ್ರ ಕುಮಾರಧಾರಾ ನದಿಯ ದೇವರ ಜಳಕ ಗುಂಡಿಯ ಮತ್ಸ್ಯತೀರ್ಥಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ವೈಶಿಷ್ಟೃವಾಗಿದೆ. ಜಾತ್ರೋತ್ಸವ ಆರಂಭವಾದ ನಂತರ ಇಲ್ಲಿಗೆ ಸಮೀಪದ ಯೇನೆಕಲ್ಲಿನ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಪವಿತ್ರ ಕಯದಿಂದ ಮೀನುಗಳು ಕ್ಷೇತ್ರಕ್ಕೆ ಬರುತ್ತವೆ ಎಂಬ ನಂಬಿಕೆ ಇದೆ. ಕೊಪ್ಪರಿಗೆ ಇಳಿದು ಜಾತ್ರೆ ಮುಗಿಯುವ ತನಕ ಇಲ್ಲಿ ಹೇರಳವಾಗಿರುವ ದೇವರ ಮೀನುಗಳು ಬಳಿಕ ಸ್ವಸ್ಥಾನಕ್ಕೆ ಮರಳುತ್ತವೆ. ಜಾತ್ರೆಯ ನಂತರ ರಕ್ಷಣಾ ದೈವಗಳಿಗೆ ಕೊಡುವ ಕಟ್ಟುಕಟ್ಟಳೆಯ ಕೋಲ ಮತ್ತು ಪರ್ವಗಳನ್ನೊಳಗೊಂಡ ಗೋಪುರ ನಡಾವಳಿಯ ನಂತರ ಕುಮಾರಧಾರೆಗೆ ಪುರುಷರಾಯ ದೈವವು ಬಂದು ಮತ್ಸ್ಯ ತೀರ್ಥದಲ್ಲಿರುವ ದೇವರ ಮೀನುಗಳಿಗೆ ನೈವೇದ್ಯ ಸಮರ್ಪಣೆ ಮಾಡುತ್ತದೆ. ಬಳಿಕ ದೇವರ ಮೀನುಗಳು ಸ್ವಸ್ಥಾನ ಸೇರುತ್ತವೆ.

ಈ ಮೀನುಗಳು ಶ್ರಾವಣ ಮಾಸದಲ್ಲಿ ಕುಮಾರಧಾರಾದ ಉಪನದಿಯಾದ ದರ್ಪಣತೀರ್ಥದಲ್ಲಿ ದೇವಳದ ಮುಂಭಾಗಕ್ಕೆ ಬರುತ್ತವೆ. ಇದಕ್ಕೆ ಈ ತಿಂಗಳು ಪೂರ್ತಿ ದೇವರ ನೈವೇಧ್ಯವನ್ನು ಹಾಕಲಾಗುತ್ತದೆ. ಬಳಿಕ ಅದು ಕುಮಾರಧಾರಾ ನದಿಯ ಇತರ ಭಾಗಕ್ಕೆ ತೆರಳಿ ಜಾತ್ರೆ ವೇಳೆ ಗುಂಪಾಗಿ ಜಳಕದ ಗುಂಡಿಗೆ ಬರುತ್ತವೆ. ಈ ಪವಿತ್ರ ಮತ್ಸ್ಯಗಳಿಗೆ ಶ್ರೀ ದೇವರ ಅವಭೃತ ಸ್ನಾನದ ಮೊದಲು ಅರ್ಚಕರು ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net