

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಾನುವಾರ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು. ಶುದ್ಧ ಷಷ್ಠಿ, ಆಶ್ಲೇಷ ನಕ್ಷತ್ರ ಮತ್ತು ನಿತ್ಯೋತ್ಸವ ಸಂಪನ್ನವಾಗುವ ಪುಣ್ಯ ದಿನ ಶ್ರೀ ದೇವರ ದರುಶನ ಮಾಡಿ, ಸೇವಾಧಿಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು.
ಶನಿವಾರ ರಾತ್ರಿಯೇ ಕ್ಷೇತ್ರಕ್ಕೆ ಅತ್ಯಧಿಕ ಭಕ್ತರು ಆಗಮಿಸಿದ್ದರು. ದೇಗುಲದ ವಸತಿಗೃಹ ಹಾಗೂ ಖಾಸಗಿ ವಸತಿಗೃಹಗಳು ತುಂಬಿದ್ದವು. ಶಾಲೆಗಳು ಆರಂಭವಾದರೂ ಕ್ಷೇತ್ರಕ್ಕೆ ವಾರಾಂತ್ಯದಲ್ಲಿ ಭಕ್ತರು ಬರುತ್ತಲೇ ಇದ್ದಾರೆ. ಮಳೆಯ ಪ್ರಮಾಣ ಕಡಿಮೆ ಇದ್ದು, ಮಧ್ಯಾಹ್ನ ಬಿಸಿಲಿನ ವಾತಾವರಣ ಇದ್ದುದರಿಂದ ಭಕ್ತರಿಗೆ ಅನುಕೂಲವಾಗಿತ್ತು.
ಆಶ್ಲೇಷ ನಕ್ಷತ್ರದ ಪುಣ್ಯ ದಿನ 1822 ಮಂದಿ ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ಉಳಿದಂತೆ ನಾಗಪ್ರತಿಷ್ಠಾಪನೆ, ತುಲಾಭಾರ, ಪಂಚಾಮೃತ ಮಹಾಭಿಷೇಕ, ಅಭಿಷೇಕ, ಮಹಾಪೂಜೆ, ಶೇಷ ಸೇವೆ, ಕಾರ್ತಿಕ ಪೂಜೆ ಮೊದಲಾದ ಸೇವೆಗಳನ್ನು ನೆರವೇರಿಸಿದರು.
ಷಣ್ಮುಖ ಪ್ರಸಾದ ಭೋಜನ ಶಾಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೋಜನ ಸ್ವೀಕರಿಸಿದರು. ಬೆಳಗ್ಗೆ 10.30ರಿಂದ ಸಂಜೆ 4.15 ಗಂಟೆ ತನಕ ನಿರಂತರವಾಗಿ ಪ್ರಸಾದ ಭೋಜನ ವಿತರಿಸಲಾಯಿತು. ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಬುಫೆ ಮಾದರಿಯಲ್ಲಿ ವಿಶೇಷ ಭೋಜನ ಪ್ರಸಾದ ವ್ಯವಸ್ಥೆಯನ್ನು ದೇಗುಲದಿಂದ ಮಾಡಲಾಗಿತ್ತು. ಶೃಂಗೇರಿ ಮಠ, ಗಣಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ಭೋಜನ ವಿತರಿಸಲಾಯಿತು. ಷಣ್ಮುಖ ಪ್ರಸಾದ ಸೇರಿ ಉಳಿದ ಮೂರು ಕಡೆಗಳಲ್ಲಿ ಹಗಲು ರಾತ್ರಿ 40 ಸಾವಿರಕ್ಕೂ ಅಧಿಕ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದ್ದಾರೆ. 5 ಸಾವಿರ ಭಕ್ತರು ಬೆಳಗ್ಗಿನ ಉಪಾಹಾರ ಸ್ವೀಕರಿಸಿರಬಹುದು ಎಂದು ಅಂದಾಜಿಸಲಾಗಿದೆ.