ಕುಕ್ಕೆ ಕ್ಷೇತ್ರದಲ್ಲಿ ಬೆಳಗಿದ ಲಕ್ಷದೀಪ : ವಿಶೇಷ ವಿನ್ಯಾಸಗಳಿಂದ ಉತ್ಸವಕ್ಕೆ ಮೆರುಗು

New Project (24)
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ವಾರ್ಷಿಕ ಜಾತ್ರೋತ್ಸವದ ಲಕ್ಷದೀಪೋತ್ಸವದ ದಿನ ಕ್ಷೇತ್ರದಲ್ಲಿ ಲಕ್ಷ ದೀಪ ಬೆಳಗಿತು.

ಸಾಲು ಹಣತೆ ದೀಪಗಳ ನಡುವೆ ಶ್ರೀ ದೇವರ ಚಂದ್ರಮಂಡಲ ರಥೋತ್ಸವ ನೆರವೇರಿತು. ಬೆಳಗಿದ ಲಕ್ಷದೀಪ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು. ಶ್ರೀ ದೇವಳ ಸೇರಿದಂತೆ ಗೋಪುರದ ಬಳಿಯಿಂದ ಕಾಶಿಕಟ್ಟೆ ತನಕ ಹಾಗೂ ಆದಿಸುಬ್ರಹ್ಮಣ್ಯ ದೇವಳ ಮತ್ತು ಶ್ರೀ ದೇವಳದ ಪರಿಸರದಲ್ಲಿ ಒಟ್ಟು ಒಂದು ಲಕ್ಷ ದೀಪಗಳು ಪ್ರಜ್ವಲಿಸಿತು.

ಸಂಘ-ಸಂಸ್ಥೆಗಳ, ವರ್ತಕರ, ವಿದ್ಯಾರ್ಥಿಗಳ, ಊರ ಪರವೂರ ಭಕ್ತರು ಮತ್ತು ಸಾರ್ವಜನಿಕರ ಸಹಕಾರದಿಂದ ಲಕ್ಷದೀಪೋತ್ಸವದ ದಿನ ಲಕ್ಷ ದೀಪಗಳು ಕ್ಷೇತ್ರದಲ್ಲಿ ಬೆಳಗಿತು. ಶ್ರೀ ದೇವಳದ ರಾಜಗೋಪುರದಿಂದ ರಥಬೀದಿ ಪರಿಸರದಲ್ಲಿ ರಸ್ತೆಯ ಇಕ್ಕೆಲ, ಆಟೋ ನಿಲ್ದಾಣದಿಂದ ಸವಾರಿ ಮಂಟಪದ ತನಕ, ರಥಬೀದಿ ಜಂಕ್ಷನ್‌ನಿಂದ ರಕ್ತೇಶ್ವರಿ ಗುಡಿ ತನಕ ಎಡಭಾಗದಲ್ಲಿ, ಬಲಭಾಗದಲ್ಲಿ, ಆದಿಶೇಷ ಆದಿಸುಬ್ರಹ್ಮಣ್ಯ ರಸ್ತೆ, ರಕ್ತೇಶ್ವರಿ ಗುಡಿಯಿಂದ ಟ್ಯಾಕ್ಸಿ ನಿಲ್ದಾಣ ತನಕ, ಟ್ಯಾಕ್ಸಿ ನಿಲ್ದಾಣದಿಂದ ಕಾಶಿಕಟ್ಟೆ ತನಕ, ಕಾಶಿಕಟ್ಟೆ ವೃತ್ತದ ಎಡಭಾಗ, ಪಂಚಾಯಿತಿ ಎದುರುಗಡೆ, ಐನೆಕಿದು ಸಹಕಾರಿ ಸಂಘದ ಎದುರು, ಮಹಿಳಾ ಸೊಸೈಟಿ ಎದುರು, ಆಶ್ಲೇಷ ವಸತಿಗೃಹದ ಎದುರು, ಬಸ್ ನಿಲ್ದಾಣ ಪರಿಸರ, ಅಭಯ ಆಂಜನೇಯ ಗುಡಿ ಸಮೀಪದ ಪಾರ್ಕಿಂಗ್ ಪರಿಸರ, ಕುಮಾರಧಾರಾ, ಆದಿಸುಬ್ರಹ್ಮಣ್ಯ, ಆದಿಸುಬ್ರಹ್ಮಣ್ಯ ಉದ್ಯಾನವನದಲ್ಲಿ ದೀಪ ಪ್ರಜ್ವಲಿಸಿತು.

ಹಣತೆಯಲ್ಲಿ ಹೂವಿನ ಚಿತ್ತಾರ

ಪರಿಸರದ ಎಲ್ಲ ಸ್ಥಳಗಳಲ್ಲಿ ಸಂಘ-ಸಂಸ್ಥೆಗಳು, ವರ್ತಕರು, ಸಾರ್ವಜನಿಕರು, ಭಕ್ತರು, ಪಂಚಾಯಿತಿ, ಪೊಲೀಸ್ ಠಾಣೆ, ಸಹಕಾರಿ ಸಂಘಗಳು ಮತ್ತು ಭಕ್ತರಿಗೆ ಜವಾಬ್ದಾರಿ ನೀಡಲಾಗಿತ್ತು. ಎಲ್ಲರೂ ಅವರದೇ ಪರಿಕಲ್ಪನೆಯಲ್ಲಿ ಹಣತೆಗಳನ್ನು ಇರಿಸಿ ದೀಪ ಬೆಳಗಿಸಿದ್ದರು. ಕೆಲವರು ಹಣತೆಯಲ್ಲಿ ರಂಗೋಲಿ ಮತ್ತು ಹೂವಿನ ಚಿತ್ತಾರ ಬಿಡಿಸಿದ್ದರು. ಇನ್ನಿತರರು ಗೋಪುರ, ವೃತ್ತ, ತ್ರಿಭುಜ, ಓಂ, ಸ್ವಸ್ತಿಕ್ ಮೊದಲಾದ ಮಾದರಿಗಳನ್ನು ರಚಿಸಿ ಅತ್ಯಾಕರ್ಷಕಗೊಳಿಸಿದ್ದರು. ಶ್ರೀ ದೇವಳದಿಂದ ಹಣತೆ, ಬತ್ತಿ ಮತ್ತು ಎಣ್ಣೆಯನ್ನು ನೀಡಲಾಗಿತ್ತು. ಭಕ್ತರ ಸಹಕಾರದಿಂದ ಕ್ಷೇತ್ರದಲ್ಲಿ ಲಕ್ಷ ದೀಪ ಪ್ರಜ್ವಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net