

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಗಲಕೋಟೆಯ ಉದ್ಯಮಿ ನಾಗರಾಜ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್.ಗಲಗಲಿ ಜಮಖಂಡಿ ಮತ್ತು ಕುಟುಂಬಸ್ಥರು ಸೇವಾರೂಪದಲ್ಲಿ ಸಮರ್ಪಿಸಲಿರುವ ನೂತನ ಬೆಳ್ಳಿಪಲ್ಲಕಿ ಭಕ್ತಿ ಸಡಗರದ ಭವ್ಯ ಮೆರವಣಿಗೆಯೊಂದಿಗೆ ಭಾನುವಾರ ಸಂಜೆ ಕುಕ್ಕೆ ಪುರಪ್ರವೇಶಿಸಿತು. ದೇವಳದ ಆನೆ ಯಶಸ್ವಿ ಪಲ್ಲಕಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿತು. ಬಳಿಕ ಕಾಶಿಕಟ್ಟೆಯಿಂದ ಭಕ್ತಿಪೂರ್ವಕವಾದ ಭವ್ಯ ಮೆರವಣಿಗೆ ಆರಂಭವಾಯಿತು.
ಗೋಪುರದ ಬಳಿಕ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಪಲ್ಲಕಿಗೆ ಪುಷ್ಪಾರ್ಚನೆ ಮಾಡಿ ಪುಷ್ಪಮಾಲೆ ಸಮರ್ಪಿಸಿದರು. ಗೋಪುರದ ಬಳಿಯಿಂದ ಸೇವಾರ್ಥಿಗಳಾದ ನಾಗರಾಜ ಕುಲಕರ್ಣಿ, ಭೀಮಾಜಿ, ವೈ.ಎಸ್.ಗಲಗಲಿ ಜಮಖಂಡಿ, ಸೇವಾರ್ಥಿಗಳ ಕುಟುಂಬ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಡಾ.ಚಿನ್ಮಯಿ ಕೊಚ್ಚಿ, ಶ್ರೀನಿಧಿ, ಯದುನಂದನ ಗಲಗಲಿ, ಸುಮಂತ್, ರಾಘವ್, ಸುದನ್ವ ದೇವಳಕ್ಕೆ ಪಲ್ಲಕಿಯನ್ನು ಮೆರವಣಿಗೆಯಲ್ಲಿ ಹೊತ್ತೊಯ್ದರು.
ಸಮರ್ಪಣೆ: ಇಂದು ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ನೂತನ ಬೆಳ್ಳಿಯ ಪಲ್ಲಕಿಯನ್ನು ಶ್ರೀ ದೇವರಿಗೆ ಸಮರ್ಪಿಸಲಿದ್ದಾರೆ.