

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗುರುವಾರದಿಂದ (ಸೆ.24) ಮೂರು ಪಾಳಿಯಲ್ಲಿ ಆಶ್ಲೇಷ ಬಲಿ ಸೇವೆ ನಡೆಯಲಿದೆ. ಪ್ರತಿ ಪಾಳಿಯಲ್ಲಿ 75 ರಶೀದಿಗಳಂತೆ ಒಟ್ಟು ದಿನದಲ್ಲಿ 225 ರಶೀದಿ ವಿತರಣೆಯಾಗಲಿದೆ ಎಂದು ದೇವಳದ ಆಡಳಿತಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ.
ದೇವಳಕ್ಕೆ ದಿನವಾಹಿ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿರುವುದರಿಂದ ಮತ್ತು ಪ್ರಮುಖ ಸೇವೆಗಳ ಸಂಖ್ಯೆ ಅಧಿಕ ಮಾಡಲು ಭಕ್ತರಿಂದ ಬೇಡಿಕೆ ಬರುತ್ತಿರುವುದರಿಂದ ಸೇವಾ ಸಂಖ್ಯೆ ಏರಿಸಲಾಗಿದೆ. ಶೇ.50ರಷ್ಟು ಆಶ್ಲೇಷ ಬಲಿ ಸೇವೆಯನ್ನು ಮುಂಗಡ ಬುಕಿಂಗ್ಗೆ ಅವಕಾಶ ಮಾಡಿಕೊಡಲಾಗುವುದು.
ಷಷ್ಠಿ, ಆಶ್ಲೇಷ ನಕ್ಷತ್ರ ದಿನ, ಭಾನುವಾರ, ಸಾರ್ವತ್ರಿಕ ಸರ್ಕಾರಿ ರಜಾದಿನಗಳಲ್ಲಿ ಮೂರು ಪಾಳಿಯಲ್ಲಿ ಒಟ್ಟು 300 ರಶೀದಿ ನೀಡಲಾಗುವುದು ಎಂದರು.
ಸರ್ಪಸಂಸ್ಕಾರ ಸೇವೆಯನ್ನು 3,107 ಮಂದಿ ಮುಂಗಡವಾಗಿ ಕಾಯ್ದಿರಿಸಿದ್ದಾರೆ. ದೇವಳದಲ್ಲಿ ಭಕ್ತರಿಗೆ ಬಫೆ ಮಾದರಿಯಲ್ಲಿ ಭೋಜನ ಪ್ರಸಾದ ನೀಡಲಾಗುತ್ತಿದೆ ಎಂದರು.